ಬೆಂಗಳೂರು, ಮಾ.18 (DaijiworldNews/MB) : ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳಿಗೆ ಯುವತಿ ನೆಲೆಸಿದ್ದ ಪಿಜಿಯಿಂದ 9.20 ಲಕ್ಷ ರೂ. ನಗದು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಈ ಹಿಂದೆ ಯುವತಿಯ ಪಿಜಿಯಿಂದ 23 ಲಕ್ಷ ನಗದು ಲಭಿಸಿದೆ ಎಂದು ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಎಸ್ಐಟಿ ಉನ್ನತ ಅಧಿಕಾರಿಗಳು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, ಯುವತಿಯ ಪಿಜಿಯಲ್ಲಿ 9.20 ಲಕ್ಷ ನಗದು ಮಾತ್ರ ಪತ್ತೆಯಾಗಿದೆ. ಸಿಡಿಯಲ್ಲಿದ್ದ ಯುವತಿಗೆ 25 ಲಕ್ಷ ಹಣ ಸಂದಾಯವಾಗಿದೆ ಎಂದು ಮಾತ್ರ ತಿಳಿದು ಬಂದಿರುವುದಾಗಿ ತಿಳಿಸಿದ್ದಾರೆ.
ಆದರೆ ಯುವತಿಗೆ ಇದಿಷ್ಟೇ ಹಣ ಲಭಿಸಿದೆ ಎಂದು ಹೇಳುವಂತಿಲ್ಲ. ಹೆಚ್ಚೂ ಇರಬಹುದು ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ. ಏತನ್ಮಧ್ಯೆ ಆರೋಪಿ ನರೇಶ್ ಮನೆಯಲ್ಲಿಯೂ 18.5 ಲಕ್ಷ ಚಿನ್ನ ಖರೀದಿ ಮಾಡಿರುವ ರಶೀದಿ ಪತ್ತೆಯಾಗಿದೆ. ಲ್ಯಾಪ್ಟಾಪ್, ಪೆನ್ಡ್ರೈವ್ ಮೊದಲಾದ ಪ್ರಮುಖ ದಾಖಲೆಗಳು ಸಿಕ್ಕಿದೆ.
ಪ್ರಸ್ತುತ ವಿಶೇಷ ತನಿಖಾ ತಂಡವು ಭವಿತ್, ಅರುಣ್, ಲಕ್ಷ್ಮೀಪತಿ, ಯುವತಿಯ ಬಾಯ್ಫ್ರೆಂಡ್ ಆಕಾಶ್, ಚೇತನ್ ಎಂಬ ಆರು ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈವರೆಗೆ 30ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದೆ.
ಏತನ್ಮಧ್ಯೆ ಸಿಡಿ ಬಿಡುಗಡೆ ಮಾಡುವ ಮುನ್ನ ಈ ಪ್ರಕರಣದ ಕಿಂಗ್ಪಿನ್ಗಳಾದ ನರೇಶ್, ಶ್ರವಣ್, ಯುವತಿ, ಲಕ್ಷ್ಮೀಪತಿ ಮತ್ತು ಆಕಾಶ್ ಅವರು ಸಿಡಿ ಬಿಡುಗಡೆ ಆರ್ಟಿ ನಗರದಲ್ಲಿ ಸಭೆ ನಡೆಸಿದ್ದಾರೆ. ಐವರ ಮೊಬೈಲ್ ಲೊಕೇಷನ್ ಸುಮಾರು 2 ಗಂಟೆಗಳ ಕಾಲ ಒಂದೇ ಟವರ್ನಲ್ಲಿತ್ತು ಎಂದು ತಿಳಿದು ಬಂದಿದೆ.
ಇನ್ನು ಈ ಪೈಕಿ ಆರೋಪಿ ಶ್ರವಣ್ ಎಂಬಾತನ ಅಣ್ಣ ಚೇತನ್ ಅಕೌಂಟ್ಗೆ 20 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಆಗಿದೆ. ಈ ಹಣದ ಮೂಲದ ತನಿಖೆಯನ್ನೂ ಕೂಡಾ ಎಸ್ಐಟಿ ನಡೆಸುತ್ತಿದೆ. ಹಲವು ಬ್ಯಾಂಕ್ ಖಾತೆಗಳಿಂದ ಚೇತನ್ ಖಾತೆಗೆ ಹಣ ಸಂದಾಯವಾಗಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಐವರ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಹಣ ಹಾಕುತ್ತಿರುವವರು ಯಾರು ಎಂಬ ತನಿಖೆಯಲ್ಲಿ ಅಧಿಕಾರಿಗಳು ತೊಡಗಿದ್ದು ಈ ಮಾಹಿತಿ ಲಭಿಸಿದರೆ ಈ ಪ್ರಕರಣದಲ್ಲಿ ತಿರುವು ಕಂಡು ಬರುವ ಸಾಧ್ಯತೆಗಳು ಅಧಿಕವಾಗಿದೆ.
ಈ ನಡುವೆ ಆರೋಪಿ ನರೇಶ್ ಜೀಪ್ ಬುಕ್ ಮಾಡಲು ಅಡ್ವಾನ್ಸ್ ನೀಡಿರುವ ಬಗ್ಗೆ, 2 ಬಾರಿ ಕಾರು ಬುಕ್ ಮಾಡಿ ಮತ್ತೆ ಕ್ಯಾನ್ಸಲ್ ಮಾಡಿರುವ ಬಗ್ಗೆ, 10 ಲಕ್ಷ ಮೌಲ್ಯದ ಚಿನ್ನದ ಚೈನ್ ಖರೀದಿಸಿರುವ ಬಗ್ಗೆ ಮೈಸೂರು, ಕೊಡಗು, ಸೋಮವಾರಪೇಟೆ ಭಾಗದಲ್ಲಿ ಜಮೀನು ಖರೀದಿಗೆ ಹುಡುಕಾಟ ನಡೆಸಿದ್ದ ಬಗ್ಗೆ ಎಸ್ಐಟಿಗೆ ಮಾಹಿತಿ ಲಭಿಸಿದೆ ಎನ್ನಲಾಗಿದೆ. ಆದರೆ ನರೇಶ್ ಜೊತೆ ನಾಲ್ವರು ನಾಪತ್ತೆ ಆಗಿದ್ದಾರೆ. ನರೇಶ್, ಶ್ರವಣ್ ಹಾಗೂ ಯುವತಿಯ ಜೊತೆಗೆ ಬೆಂಗಳೂರಿನ ಜೆ.ಪಿ.ನಗರದ ನಿವಾಸಿಯಾಗಿರುವ ಓರ್ವ ಉದ್ಯಮಿಯೂ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ನರೇಶ್ ಹಾಗೂ ಈ ಉದ್ಯಮಿ ಜೊತೆಯಾಗಿಯೇ ಪರಾರಿಯಾಗಿದ್ದಾರೆಯೇ ಎಂಬ ಅನುಮಾನ ಕೂಡಾ ವ್ಯಕ್ತವಾಗಿದೆ. ಈ ಸಿಡಿ ಪ್ರಕರಣದಲ್ಲಿ ಆ ಉದ್ಯಮಿಯ ಕೈವಾಡವಿದೆಯೇ ಎಂಬ ಶಂಕೆಯೂ ಇದೆ.