ನವದೆಹಲಿ, ಮಾ.18 (DaijiworldNews/PY): ಹರಿದ ಜೀನ್ಸ್ ಧರಿಸುವ ಯುವತಿಯವರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಹೊಸದಾಗಿ ನೇಮಕಗೊಂಡಿರುವ ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ನೀಡಿದ ವಿವಾದಾತ್ಮಕ ಹೇಳಿಕೆಗೆ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಪ್ರತ್ಯುತ್ತರ ನೀಡಿದ್ದು, "ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ" ಎಂದಿದ್ದಾರೆ.
ಈ ಬಗ್ಗೆ ಇನ್ಸ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ನವ್ಯಾ ಅವರು, "ನಮ್ಮ ಬಟ್ಟೆಗಳನ್ನು ಬದಲಾಯಿಸುವ ಮುನ್ನ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ. ನೀವು ಸಮಾಜಕ್ಕೆ ಯಾವ ರೀತಿಯಾದ ಸಂದೇಶವನ್ನು ನೀಡುತ್ತಿದ್ದೀರಿ ಎನ್ನುವುದು ಇಲ್ಲಿ ಆಶ್ಚರ್ಯಕರವಾದ ಸಂಗತಿಯಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೀರಥ್ ಸಿಂಗ್ ರಾವತ್ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನವ್ಯಾ, ತಮ್ಮ ಹರಿದ ಜೀನ್ಸ್ವೊಂದರ ಫೋಟೋವನ್ನು ಹಂಚಿಕೊಂಡಿದ್ದು, "ನಾನು ಕೂಡಾ ಹರಿದ ಜೀನ್ಸ್ ಧರಿಸುತ್ತೇನೆ. ಬಹಳ ಹೆಮ್ಮೆಯಿಂದ ಧರಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
"ಹರಿದ ಜೀನ್ಸ್ ಧರಿಸುವ ಯುವತಿಯವರು ಸಮಾಜದಲ್ಲಿ ಕೆಟ್ಟ ನಿದರ್ಶನಗಳನ್ನು ಹುಟ್ಟುಹಾಕುತ್ತಿದ್ದಾರೆ" ಎಂದು ಸಿಎಂ ತೀರಥ್ ಸಿಂಗ್ ರಾವತ್ ಹೇಳಿದ್ದರು.
"ಮಂಡಿಗಳನ್ನು ತೋರಿಸಿಕೊಂಡು ಹರಿದ ಜೀನ್ಸ್ ಧರಿಸುವುದು ಶ್ರೀಮಂತರ ಮಕ್ಕಳಂತೆ ಕಾಣುವುದು ಈಗಿನ ಟ್ರೆಂಡ್ ಆಗಿಬಿಟ್ಟಿದೆ. ಮನೆಯಿಂದ ಅಲ್ಲದೇ ಇವೆಲ್ಲಾ ಎಲ್ಲಿಂದ ಬರುತ್ತಿವೆ ? ಹರಿದ ಜೀನ್ಸ್ನಲ್ಲಿ ತನ್ನ ಮಂಡಿ ತೋರಿಸಿಕೊಳ್ಳುವ ನನ್ನ ಮಗನನ್ನು ನಾನು ಎತ್ತ ಕೊಂಡೊಯ್ಯುತ್ತಿದ್ದೇನೆ ಎಂಬುದನ್ನು ಮನೆಯವರು ಯೋಚಿಸಬೇಕು" ಎಂದಿದ್ದರು.