ನವದೆಹಲಿ, ಮಾ.18 (DaijiworldNews/HR): ಟಿಆರ್ಪಿ ತಿರುಚಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತಾಗಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಮಹಾರಾಷ್ಟ್ರ ಮೂಲದ ಕೆಲವು ಟಿವಿ ವಾಹಿನಿಗಳ ಸುಮಾರು 32 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎನ್ನಲಾಗಿದೆ.
ಸಾಂಧರ್ಭಿಕ ಚಿತ್ರ
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮತ್ತು ಮಹಾ ಮೂವಿ ಚಾನೆಲ್ಗಳಂತಹ ಕೆಲವು ವಾಹಿನಿಗಳಿಗೆ ಸೇರಿದ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಮುಂಬೈ, ಇಂದೋರ್, ದೆಹಲಿ ಮತ್ತು ಗುರುಗಾಂವ್ಗಳಲ್ಲಿನ ವಾಣಿಜ್ಯ ಹಾಗೂ ನಿವಾಸಿ ಘಟಕಗಳು ಮತ್ತು ಭೂಮಿ, ಕೆಲವು ಬ್ಯಾಂಕ್ ಠೇವಣಿಗಳು ಸೇರಿವೆ ಎಂದು ಇ.ಡಿ ತಿಳಿಸಿದೆ.
ಈ ಎಲ್ಲಾ ವಾಹಿಗಳಲ್ಲಿ ಎರಡು ವಾಹಿನಿಗಳ ಒಟ್ಟಾರೆ ಟಿಆರ್ಪಿಯು ಕೇವಲ ಐದು ಮನೆಗಳಿಂದ ಮುಂಬೈನ ಒಟ್ಟುಎ ಶೇ 25ರಷ್ಟು ವೀವರ್ಶಿಪ್ ತೋರಿಸುತ್ತಿದ್ದು, ಮೂರನೇ ವಾಹಿನಿಯಲ್ಲಿ ಐದು ನಿಗದಿತ ಮನೆಗಳಿಂದ ನಿರ್ದಿಷ್ಟ ಅವಧಿಯಲ್ಲಿ ಶೇ 12ರಷ್ಟು ವೀವರ್ಶಿಪ್ ಮುಂಬೈನಲ್ಲಿ ತೋರಿಸಲಾಗುತ್ತಿತ್ತು ಎಂದು ಸಂಸ್ಥೆ ತಿಳಿಸಿದೆ.
ಇನ್ನು ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ ಅನ್ನು ತಿರುಚಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡ ಬಳಿಕ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿತ್ತು ಎನ್ನಲಾಗಿದೆ.