ಬೆಂಗಳೂರು, ಮಾ.18 (DaijiworldNews/MB) : ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯನ್ನು ಟೀಕಿಸಿದ ಬಿಜೆಪಿ ಶಾಸಕರ ವಿರುದ್ದ ಕಿಡಿಕಾರಿದ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ, ''ತಾಕತ್ತಿದ್ದರೇ ಸಿದ್ದರಾಮಯ್ಯ ಜಾರಿಗೆ ತಂದ ಎಲ್ಲಾ ಯೋಜನೆಗಳನ್ನು ರದ್ದು ಮಾಡಿ'' ಎಂದು ಸವಾಲೆಸೆದರು.
ಮೊದಲು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಶಾಸಕ ಯು ಟಿ ಖಾದರ್ ಅವರು, ''ಸರ್ಕಾರ ಬಿಪಿಎಲ್ ಕಾರ್ಡ್ ರದ್ದು ಮಾಡಿರುವುದು ಒಳ್ಳೆಯ ವಿಷಯವಲ್ಲ. ಎಷ್ಟು ಮಂದಿಗೆ ಬಿಪಿಎಲ್ ಕಾರ್ಡ್ ನೀಡಿದ್ದೀರಿ ಎಂದು ಹೇಳಿ ನಂತರ ಹೆಮ್ಮೆ ಪಡಿ. ಈಗ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ಕಡಿಮೆ ಮಾಡಿದೆ'' ಎಂದು ಹೇಳಿದರು.
ಈ ಸಂದರ್ಭ ಖಾದರ್ ವಿರುದ್ದ ಮಾತನಾಡಿ ಸರ್ಕಾರದ ಪರ ಮಾತನಾಡಿದ ಕೆಜಿ ಬೋಪಯ್ಯ, ''ಕೇಂದ್ರ ಸರ್ಕಾರದ ಪಡಿತರ ಧಾನ್ಯ ವಿತರಣೆ ಉತ್ತಮವಾಗಿದೆ. ವಿಪಕ್ಷ ಕಾಂಗ್ರೆಸ್ ಶಾಸಕರಿಗೆ ನಮ್ಮ ಸಚಿವರುಗಳು ಸರಿಯಾದ ಉತ್ತರ ನೀಡಬೇಕು'' ಎಂದರು. ಬಳಿಕ ಬಿಜೆಪಿ ಶಾಸಕರು ಸಿದ್ದರಾಮಯ್ಯರ ಅನ್ನಭಾಗ್ಯ ಯೋಜನೆಯನ್ನು ಟೀಕಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ''ತಾಕತ್ತಿದ್ದರೇ ಸಿದ್ದರಾಮಯ್ಯ ಜಾರಿಗೆ ತಂದ ಎಲ್ಲಾ ಯೋಜನೆಗಳನ್ನು ರದ್ದು ಮಾಡಿ. ಒಂದು ವೇಳೆ ಯೋಜನೆಗಳು ಕೆಟ್ಟದ್ದಾಗಿದ್ದರೇ ಅವುಗಳನ್ನು ಯಾಕೆ ನೀವು ನಿಲ್ಲಿಸಬಾರದು'' ಎಂದು ಸವಾಲು ಹಾಕಿದರು.