ಬೆಂಗಳೂರು, ಮಾ.18 (DaijiworldNews/HR): ಲೋಕಾಯುಕ್ತ ನ್ಯಾಯಾಲಯ ಆದೇಶದಿಂದ ಪಾರಾಗಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಮತ್ತೆ ಭೂ ಕಂಟಕ ಸುತ್ತಿ ಕೊಂಡಿದೆ ಎನ್ನಲಾಗಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸ್ವಾಧೀನ ಪಡಿಸಿಕೊಂಡಿದ್ದ ಭೂಮಿ ಡಿ ನೋಟಿಫಿಕೇಷನ್ ಅಕ್ರಮಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದ್ದು, ಈ ಮೂಲಕ ಹೂವಿನಾಯಕನಹಳ್ಳಿ ಡಿ ನೋಟಿಫಿಕೇಷನ್ ಭೂ ಹಗರಣ ತನಿಖೆ ಎದುರಿಸಬೇಕಾಗಿದೆ ಎನ್ನಲಾಗಿದೆ.
ಹೂವಿನಾಯಕನಹಳ್ಳಿಯಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಕೆಐಎಡಿಬಿ ಭೂ ಸ್ವಾಧೀನ ಪಡಿಸಿಕೊಂಡಿದ್ದು, ಅದರಲ್ಲಿ 20 ಎಕರೆ ಭೂಮಿಯನ್ನು ಮುಖ್ಯಮಂತ್ರಿ ನಿಯಮ ಉಲ್ಲಂಘಿಸಿ ಡಿ ನೋಟಿಫಿಕೇಷನ್ ಮಾಡಿದ್ದರು. ಡಿ ನೋಟಿಫೈ ಅಕ್ರಮಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೈಗಾರಿಕಾ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಮತ್ತಿತರ ವಿರುದ್ಧ ಲೋಕಾಯುಕ್ತ ಪೊಲೀಸರು ಕೇಸು ದಾಖಲಿಸಿದ್ದು, ದೋಷಾರೋಪ ಪಟ್ಡಿಯನ್ನು ಲೋಕಾಯುಕ್ತ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಇನ್ನು ಈ ಪ್ರಕರಣ ವಿಚಾರಣೆ ನಡೆಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಹಾಗೂ ಕಟ್ಡಾ ಸುಬ್ರಮಣ್ಯ ನಾಯ್ಡು ಅವರನ್ನು ಪ್ರಕರಣದಿಂದ ಕೈ ಬಿಟ್ಟಿದ್ದು, ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿತ್ತು. ನ್ಯಾ. ಮೈಕಲ್ ಡಿ. ಕುನ್ನಾ ಅವರಿದ್ದ ನ್ಯಾಯಪೀಠ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿದೆ. ಈ ಮೂಲಕ ಸಿಎಂ ಮೇಲಿನ ಭೂ ಕಂಟಕ ಆರೋಪ ಪ್ರಕರಣ ವಿಚಾರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ ಎನ್ನಲಾಗಿದೆ.