ಬೆಂಗಳೂರು, ಮಾ.18 (DaijiworldNews/MB) : ಜೈ ಶ್ರೀರಾಮ್, ಜೈ ಹನುಮಾನ್ ಎಂದು ಘೋಷಣೆ ಕೂಗಿದ್ರೆ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತಾ ಎಂದು ವಿಧಾನ ಪರಿಷತ್ನಲ್ಲಿ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಬುಧವಾರ ಪ್ರಶ್ನಿಸಿದರು.
ಬಜೆಟ್ ಮೇಲಿನ ಚರ್ಚೆ ಸಂದರ್ಭ ಮಾತನಾಡಿದ ಅವರು, ''ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ಜೈ ಶ್ರೀರಾಮ್, ಜೈ ಹನುಮಾನ್ ಘೋಷಣೆ ಕೂಗಿದ್ರೆ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗುತ್ತಾ'' ಎಂದು ಕೇಳಿದರು.
ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆದರೆ ಸರ್ಕಾರದ ವಿರುದ್ದ ವಾಗ್ದಾಳಿ ಮುಂದುವರಿಸಿದ ಮರಿತಿಬ್ಬೇಗೌಡ, ''ಮಾನ, ಮರ್ಯಾದೆಯನ್ನು ಬಿಜೆಪಿ ಕಳೆದುಕೊಂಡಿದೆ. ರೈತರು, ಕಾರ್ಮಿಕರು, ಬಡ ಜನರ ಮೇಲೆ ಸಾಲದ ಹೊರೆಯನ್ನು ಹಾಕುವ ಬಜೆಟ್ ಸ್ವೀಕರಿಸಲಾಗದು. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸಾಂಕ್ರಾಮಿಕ ಸಂದರ್ಭ ಆರ್ಥಿಕತೆಗೆ ಸಹಾಯ ಮಾಡಿದ ರೈತರು ಮತ್ತು ಕೃಷಿ ಕಾರ್ಮಿಕರ ಮೇಲೆಯೇ ಸರ್ಕಾರ ಹೊರೆ ಹಾಕಿದೆ. ಅವರಿಗೆ ತೆರಿಗೆ ವಿನಾಯಿತಿ ನೀಡುವ ಬದಲು, 31 ಖಾಸಗಿ ಕಂಪನಿಗಳಿಗೆ 1,075 ಕೋಟಿ ರೂ. ಮತ್ತು 10 ಸಕ್ಕರೆ ಕಾರ್ಖಾನೆಗಳಿಗೆ 23.95 ಕೋಟಿ ರೂ.ಗಳ ತೆರಿಗೆಯನ್ನು ಮನ್ನಾ ಮಾಡಿದೆ ಈ ಸರ್ಕಾರ'' ಎಂದು ಕಿಡಿಕಾರಿದರು.