ನವದೆಹಲಿ, ಮಾ.18 (DaijiworldNews/MB) : ಪಡಿತರ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆ ಸಂಯೋಜನೆ ಮಾಡಿಲ್ಲವೆಂಬ ಕಾರಣಕ್ಕೆ 3 ಕೋಟಿ ಪಡಿತರ ಕಾರ್ಡ್ಗಳನ್ನು ರದ್ದು ಮಾಡಿರುವುದು ಅತ್ಯಂತ ಗಂಭೀರ ವಿಚಾರ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಈ ಬಗ್ಗೆ ಮಾಹಿತಿ ನೀಡಲು ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.
ಪಡಿತರ ಚೀಟಿ ರದ್ದಾಗಿದ್ದರಿಂದ ಆಹಾರ ದೊರೆಯದೇ ಹಸಿವಿನಿಂದ ಸಾವನ್ನಪ್ಪಿದ್ದಾಲೆ ಎಂದು ಹೇಳಲಾದ ಜಾರ್ಖಂಡ್ನ 11 ವರ್ಷದ ಬಾಲಕಿಯ ತಾಯಿ ಕೊಯ್ಲಿ ದೇವಿ ಅವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ಈ ನೋಟಿಸ್ ಜಾರಿ ಮಾಡಿದ್ದು, 2017ರಿಂದ ಬಾಕಿ ಇರುವ ಈ ಪ್ರಕರಣ ಅತ್ಯಂತ ಗಂಭೀರವಾದದ್ದು, ಈ ಬಗ್ಗೆ ನಾವು ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ. ಈ ಘಟನೆಯ ಬಗ್ಗೆ ವಾರಗಳೊಳಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಬೇಕು. ಬಳಿಕ ವಿಸ್ತೃತ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದೆ.
ಅರ್ಜಿದಾರರ ಪರ ವಕೀಲ ಕಾಲಿನ್ ಗೊನ್ಸಾಲ್ವೀಸ್, ''ಕೇಂದ್ರ ಸರ್ಕಾರ ಆಧಾರ್ ಜೋಡಣೆ ಆಗಿಲ್ಲ ಎಂಬ ಕಾರಣ ನೀಡಿ ಅಂದಾಜು 3 ಕೋಟಿಯಷ್ಟು ಹಾಗೂ ಆಯಾ ರಾಜ್ಯ ಸರ್ಕಾರಗಳು ತಲಾ 10ರಿಂದ 15 ಲಕ್ಷದಷ್ಟು ಪಡಿತರ ಚೀಟಿಗಳನ್ನು ರದ್ದುಪಡಿಸಿವೆ. ಇನ್ನು ಬುಡಕಟ್ಟು ಜನರೇ ವಾಸಿಸುವಲ್ಲಿ ಬೆರಳಚ್ಚು (ಬಯೋಮೆಟ್ರಿಕ್) ಗುರುತಿಸುವ ಹಾಗೂ ಕಣ್ಣಿನ ಗೆರೆ ಗುರುತಿಸುವ ಐರಿಸ್ ಸ್ಕ್ಯಾನರ್ಗಳು ಕಾರ್ಯ ನಿರ್ವಹಿಸಿಲ್ಲದ ಉದಾಹರಣೆಗಳೂ ಇವೆ. ಬಯೋಮೆಟ್ರಿಕ್ ದೃಢೀಕರಣ ಮತ್ತು ಆಧಾರ್ ಜೋಡಣೆ ಇಲ್ಲವೆಂಬ ಕಾರಣಕ್ಕೆ ದೇಶದಾದ್ಯಂತ ಅಂದಾಜು 4 ಕೋಟಿ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ'' ಎಂದರು.
''ಕೇಂದ್ರ ಸರ್ಕಾರವು ರದ್ದಾಗಿರುವ ಪಡಿತರ ಚೀಟಿಗಳು ನಕಲಿ ಎಂದು ಹೇಳುತ್ತದೆ. ಆದರೆ ಅಸಮರ್ಪಕ ಬಯೋಮೆಟ್ರಿಕ್ ವ್ಯವಸ್ಥೆ, ಆಧಾರ್ ಕಾರ್ಡ್ ದೊರೆಯದಿರುವಿಕೆ, ಗ್ರಾಮೀಣ ಪ್ರದೇಶಗಳಲ್ಲಿನ ಅಸಮರ್ಪಕ ಅಂತರ್ಜಾಲ ವ್ಯವಸ್ಥೆಯಂತಹ ತಾಂತ್ರಿಕ ಕಾರಣಗಳನ್ನು ಕೇಂದ್ರ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ'' ಎಂದು ಆರೋಪಿಸಿದರು.
ಈ ಹೇಳಿಕೆಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮಾನ್ ಲೇಖಿ ವಿರೋಧ ವ್ಯಕ್ತಪಡಿಸಿದ್ದು, ''ಪಡಿತರ ಚೀಟಿಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ ಎಂದು ಹೇಳುವುದು ಸರಿಯಲ್ಲ. ಆಹಾರ ಭದ್ರತಾ ಕಾಯ್ದೆ ಅಡಿ ಜನಸಾಮಾನ್ಯರ ಕುಂದುಕೊರತೆ ನಿವಾರಣಾ ವ್ಯವಸ್ಥೆ ಇದೆ. ಹಾಗಿರುವಾಗ ಸರ್ಕಾರದ ಕ್ರಮವನ್ನು ತಪ್ಪಾಗಿ ತಿಳಿಯುವುದು ಸರಿಯಲ್ಲ'' ಎಂದು ಹೇಳಿದರು.
ಬಳಿಕ ನ್ಯಾಯಪೀಠವು, ಆಧಾರ್ ಕಾರಣದಿಂದ ಪಡಿತರ ಚೀಟಿ ರದ್ದು ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರ ನಾಲ್ಕು ವಾರದೊಳಗೆ ಇದಕ್ಕೆ ಉತ್ತರ ನೀಡಬೇಕು ಎಂದೂ ಕೇಂದ್ರಕ್ಕೆ ಸುಪ್ರೀಂ ಗಡುವು ನೀಡಿದೆ.