ಬೆಂಗಳೂರು, ಮಾ.18 (DaijiworldNews/MB) : ಯುವತಿಯರ ಸೋಗಿನಲ್ಲಿ ಪುರುಷರ ಪರಿಚಯ ಮಾಡಿಕೊಂಡು ಚಾಟಿಂಗ್ ವೇಳೆ ಅವರನ್ನು ನಗ್ನವಾಗುವಂತೆ ಪ್ರಚೋದಿಸಿ ಬ್ಲ್ಯಾಕ್ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ರಾಜಸ್ಥಾನದ ಗ್ಯಾಂಗ್ ಸಿಐಡಿ ಸೈಬರ್ ಪೊಲೀಸರ ಬಲೆಗೆ ಬಿದ್ದಿದೆ.
ರಾಜಸ್ಥಾನದ ಸಾಹುನ್, ಶಾರುಖ್ ಖಾನ್, ನಾಸೀರ್ ಹಾಗೂ ಸಹೀದ್ ಅನ್ವರ್ ಎಂಬವರು ಆರೋಪಿಗಳು. ಈ ನಾಲ್ವರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೋ ಯುವತಿಯರ ಫೋಟೋಗಳನ್ನು ಕದ್ದು ನಕಲಿ ಖಾತೆ ತೆರೆದು, ಹಲವು ಗಣ್ಯರಿಗೆ, ಉದ್ಯಮಿಗಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ಫ್ರೆಂಡ್ ರಿಕ್ವೆಸ್ಟ್ ಸ್ವೀಕಾರ ಮಾಡಿದವರೊಂದಿಗೆ ಪ್ರತಿದಿನವೂ ಚಾಟಿಂಗ್ ಮಾಡುತ್ತಿದ್ದರು. ಸಲುಗೆ ಬೆಳೆಸಿಕೊಂಡು ರಾತ್ರಿ ವೇಳೆ ವೀಡೀಯೋ ಕರೆ ಮಾಡಿ ಅವರನ್ನು ಪ್ರಚೋದಿಸಿ ನಗ್ನರಾಗಿಸುತ್ತಿದ್ದರು. ಬಳಿಕ ಅದೇ ವೀಡೀಯೋವನ್ನು ಆ ವ್ಯಕ್ತಿಗಳಿಗೆಯೇ ಕಳುಹಿಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದರು.
ಈ ಆರೋಪಿಗಳು ಈ ವೀಡಿಯೋ ಹಿಡಿದುಕೊಂಡು ಬ್ಲ್ಯಾಕ್ಮೇಲ್ ಮಾಡಿ 25 ಸಾವಿರದಿಂದ ಲಕ್ಷದವರೆಗೆ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಅವರು ಕೇಳಿದ್ದಷ್ಟು ಹಣ ನೀಡದಿದ್ದರೆ ಈ ವೀಡೀಯೋವನ್ನು ಫೇಸ್ಬುಕ್, ಇನ್ಸ್ಸ್ಟಾಗ್ರಾಂ, ಯೂಟ್ಯೂಬ್ ಮೂಲಕ ಹರಿಯಬಿಡುತ್ತೇವೆ ಎಂದು ಬೆದರಿಕೆ ಹಾಕುವ ಈ ಗ್ಯಾಂಗ್ ಆ ಪುರುಷರಿಂದ ಹಣ ದೋಚುತ್ತಿದ್ದರು. ಈ ಪೈಕಿ ಕೆಲವರು ನಗರದ ಹಾಗೂ ಹೊರ ನಗರಗಳ ಪೊಲೀಸ್ ಠಾಣೆಗೆಳಲ್ಲಿ ದೂರು ನೀಡಿದ್ದಾರೆ.