ಕೋಲ್ಕತಾ, ಮಾ. 17 (DaijiworldNews/SM): ಭಾರೀ ಕುತೂಹಲ ಕೆರಳಿಸಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಆಡಳಿತ ಪಕ್ಷ ಪ್ರತಿಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿಕೊಂಡಿವೆ. ಈ ನಡುವೆ ಇದೀಗ ಆಡಳಿತರೂಢ ಟಿಎಂಸಿ ತನ್ನ ಪ್ರಣಾಳಿಕೆ ಬಿಡುಗಡೆಗೊಳಿಸಿದ್ದು, ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ನಮ್ಮ ಸರ್ಕಾರ ರಾಜ್ಯದಲ್ಲಿ ಬಡತನದ ಪ್ರಮಾಣವನ್ನು ಶೇ. 40ರಷ್ಟು ಕಡಿಮೆ ಮಾಡಿದೆ ಎಂದು ಹೇಳಿದರು. ಪ್ರಣಾಳಿಕೆಯಲ್ಲಿ ವರ್ಷಕ್ಕೆ ಐದು ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ ನೀಡಿದ್ದಾರೆ. ಬಂಗಾಳದಲ್ಲಿ ಸಾಮಾನ್ಯ ವರ್ಗ ಮತ್ತು ಹಿಂದುಳಿದ ಸಮುದಾಯದ ಕನಿಷ್ಠ ವಾರ್ಷಿಕ ಆದಾಯವನ್ನು 6,000 ರೂ. ಮತ್ತು 12,000 ರೂ.ಗೆ ಏರಿಕೆ ಮಾಡುವ ಭರವಸೆ ನೀಡಿದ್ದಾರೆ. 18 ವರ್ಷಕ್ಕಿಂತ ಮೇಲ್ಪಟ್ಟ ವಿಧವೆಯರಿಗೆ ತಿಂಗಳಿಗೆ 1000 ರೂ. ಪಿಂಚಣಿ ನೀಡುವ ಉಲ್ಲೇಖವೂ ಪ್ರಣಾಳಿಕೆಯಲ್ಲಿದೆ.
ಸಾಮಾನ್ಯ ವರ್ಗದ ಕುಟುಂಬಗಳಿಗೆ ತಿಂಗಳಿಗೆ 500 ರೂ., ಎಸ್ಸಿ / ಎಸ್ಟಿ ವರ್ಗದ ಕುಟುಂಬಗಳಿಗೆ 1,000 ರೂ. ನೀಡಲಾಗುವುದು ಮತ್ತು ಈ ಹಣವನ್ನು ನೇರವಾಗಿ ಅವರ ಖಾತೆಗೆಳಿಗೆ ವರ್ಗಾಯಿಸಲಾಗುವುದೆಂದು ದೀದಿ ತಿಳಿಸಿದ್ದಾರೆ. ಹೊಸ ವಿದ್ಯಾರ್ಥಿ ಕ್ರೆಡಿಟ್ ಕಾರ್ಡ್ ಯೋಜನೆಯನ್ನು 10 ಲಕ್ಷ ರೂ.ಗಳ ಕ್ರೆಡಿಟ್ ಮಿತಿಯೊಂದಿಗೆ ಪರಿಚಯಿಸಲಾಗುವುದು ಮತ್ತು ಕೇವಲ ಶೇ. 4ರ ಬಡ್ಡಿದರವನ್ನು ವಿಧಿಸಲಾಗುವುದು ಎಂದಿದ್ದಾರೆ.