ಭುವನೇಶ್ವರ್, ಮಾ.17 (DaijiworldNews/MB) : 30 ಗೂಂಡಾಗಳ ಜೊತೆಗೆ ಸೇರಿ ಬಾಡಿಗೆದಾರನ ಮೇಲೆ ಹಲ್ಲೆ ನಡೆಸಿ, ಹಣ, ಬೆಲೆಬಾಲುವ ವಸ್ತುಗಳನ್ನು ದೋಚಿದ ಆರೋಪದ ಮೇಲೆ ಬಿಜೆಪಿ ಮುಖಂಡೆ ಉಪಾಸನಾ ಮೋಹಾಪಾತ್ರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.
ಮೂರು ಬಾರಿ ಶಾಸಕರಾಗಿದ್ದ ದಿವಂಗತ ಕಾಂಗ್ರೆಸ್ ಮುಖಂಡ ಲಾಲಟೆಂಡು ಬಿದ್ಯಾಧರ್ ಮೋಹಪಾತ್ರ ಅವರ ಪುತ್ರಿ ಉಪಾಸನಾ ಮೋಹಪಾತ್ರ ಅವರು ಮಂಗಳವಾರ ಸಂಜೆ ತನ್ನ 30 ಮಂದಿ ಬೆಂಬಲಿಗರೊಂದಿಗೆ ಐಆರ್ಸಿ ಹಳ್ಳಿಯ ಬಾಡಿಗೆದಾರ ಪ್ರಣಬ್ ರೇ ಮೇಲೆ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಭುವನೇಶ್ವರ್ ಡಿಸಿಪಿ ಉಮಾಶಂಕರ್ ದಾಸ್, ಉಪಾಸನಾ ಮತ್ತು ಅವರ 30 ರಿಂದ 40 ಬೆಂಬಲಿಗರು ಬಾಡಿಗೆದಾರನ ಮೇಲೆ ಹಲ್ಲೆ ನಡೆಸಿ, ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಮನೆ ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಈ ಹಲ್ಲೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಭುವನೇಶ್ವರ್ ಡಿಸಿಪಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಗೂಂಡಾಗಳನ್ನು ತಡೆದಿದ್ದು ಈವರೆಗೆ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿಯಾದ ಬಿಜೆಪಿ ಮುಖಂಡೆ ಉಪಸನಾ ಅವರನ್ನು ಇನ್ನೂ ಬಂಧಿಸಿಲ್ಲ ಎಂದು ವರದಿಯಾಗಿದೆ.
ಪ್ರಣಬ್ ರೇ ಅವರು ಬಿಜಯ್ ನಾಯಕ್ ಅವರ ಮನೆಯಲ್ಲಿ ವಾಸಿಸುತ್ತಿದ್ದು ಬಿಜಯ್ ಅವರು ಉಪಾಸನಾ ಪತಿಗೆ ಮನೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದರು. ಪ್ರಣಬ್ ರೇ, ಮನೆಯ ಆಂತರಿಕ ವಿನ್ಯಾಸಕ್ಕಾಗಿ 48 ಲಕ್ಷ ರೂ. ವೆಚ್ಚ ಮಾಡಿದ್ದ ನಂತರ ಬಿಜಯ್ , ತನ್ನ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.