ಕೋಲ್ಕತ್ತ, ಮಾ.17 (DaijiworldNews/PY): "ನೀವು ನಿಮ್ಮ ಧರ್ಮವನ್ನು ಅನುಸರಿಸಬೇಕು ಎಂದಿದ್ದರೆ ಬಿಜೆಪಿಗೆ ಮತ ನೀಡಬೇಡಿ" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಝಾರ್ಗ್ರಾಮ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, "ನೀವು ನಿಮ್ಮ ಧರ್ಮವನ್ನು ಅನುಸರಿಸಬೇಕು ಎಂದಿದ್ದರೆ ಬಿಜೆಪಿಗೆ ಮತ ನೀಡಬೇಡಿ. ಬಿಜೆಪಿಗೆ ಮತ ನೀಡಿದ್ದಲ್ಲಿ ನೀವು ಜೈ ಶ್ರೀರಾಮ್ ಎಂದೇ ಹೇಳಬೇಕಾಗುತ್ತದೆ. ನಿಮಗೆ ಜೈ ಸಿಯಾ ರಾಂ ಎಂದು ಹೇಳಲು ಅವಕಾಶವಿರುದಿಲ್ಲ" ಎಂದಿದ್ದಾರೆ.
"ದುರ್ಗಾ ಮಾತೆಯನ್ನು ಭಗವಾನ್ ರಾಮ ಕೂಡಾ ಪೂಜಿಸುತ್ತಿದ್ದ. ದುರ್ಗಾ ಮಾತೆಯ ಶ್ರೇಷ್ಠತೆ ತುಂಬಾ ದೊಡ್ಡದು" ಎಂದು ಹೇಳಿದ್ದಾರೆ.
"ಝಾರ್ಗ್ರಾಮ್ದಿಂದ ಬಡತನವನ್ನು ತೊಲಗಿಸಿದ್ದು ಟಿಎಂಸಿ ಸರ್ಕಾರ. ಆದರೆ, ಬಿಜೆಪಿ ಸರ್ಕಾರ ಕೇವಲ ಜನಸಾಮಾನ್ಯರಿಗೆ ತೊಂದರೆಯಾಗುವಂತ ನಿಯಮಗಳನ್ನು ಜಾರಿ ಮಾಡಿದೆ" ಎಂದು ಟೀಕೆ ಮಾಡಿದ್ದಾರೆ.
"ಇದೀಗ ಆಟ ಪ್ರಾರಂಭವಾಗಿದ್ದು, ನೀವು ಈ ಆಟದಲ್ಲಿ ಬಿಜೆಪಿಯನ್ನು ಪಶ್ಚಿಮಬಗಾಳದಿಂದ ಉಚ್ಛಾಟಿಸಲಿದ್ದೀರಿ. ಅಲ್ಲದೇ, ಬಿಜೆಪಿಯ ನಾಯಕರನ್ನು ಮನೆಗೆ ಕಳುಹಿಸುವ ಕಾರ್ಯ ನಿಮ್ಮದು" ಎಂದಿದ್ದಾರೆ.
"ಚುನಾವಣೆಗೂ ಮೊದಲು ನನ್ನನ್ನು ಹೊರಬಾರದಂತೆ ಮಾಡಲು ಬಿಜೆಪಿಯವರು ಬಯಸಿದ್ದು, ನನ್ನ ಕಾಲಿಗೆ ಗಾಯವಾಗುವಂತೆ ಮಾಡಿದ್ದಾರೆ. ನನ್ನ ಧ್ವನಿಯನ್ನು ಹತ್ತಿಕ್ಕುವ ಕಾರ್ಯವನ್ನು ಮಾಡಲು ಅವರಿಗೆ ಸಾಧ್ಯವಿಲ್ಲ. ಬಿಜೆಪಿಯನ್ನು ನಾವು ಸೋಲಿಸುತ್ತೇವೆ" ಎಂದು ತಿಳಿಸಿದ್ದಾರೆ.