ಬೆಂಗಳೂರು, ಮಾ.17 (DaijiworldNews/MB) : ''ರಾಜ್ಯದಲ್ಲಿ ಲಾಕ್ ಡೌನ್ ಅಥವಾ ರಾತ್ರಿ ಕರ್ಫ್ಯೂ ಹೇರಿಕೆ ಮಾಡುವ ಯಾವುದೇ ಚಿಂತನೆ ನಡೆಸಿಲ್ಲ. ಆದರೆ ಕೊರೊನಾ ಹರಡುವಿಕೆ ತಡೆಯಲು ಒಳಾಂಗಣ ಚಟುವಟಿಕೆಗಳಿಗೆ ಕಠಿಣ ಮಾರ್ಗಸೂಚಿ ರಚಿಸಲಾಗುತ್ತದೆ. ಕೊರೊನಾ ನಿಯಂತ್ರಣಕ್ಕೆ ಟೆಸ್ಟ್, ಟ್ರಾಕ್, ಟ್ರೀಟ್ ಎಂಬ ತ್ರೀ ಟಿ ಸೂತ್ರ ಅನುಸರಿಸಲಾಗುತ್ತದೆ'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ ಬಳಿಕ ಮಾಧ್ಯಮಕ್ಕೆ ಈ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು, ''ಕೊರೊನಾ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಮದುವೆ, ಬರ್ತ್ ಡೇ ಪಾರ್ಟಿ, ಪಾರ್ಟಿಗಳು ಮೊದಲಾದ ಒಳಾಂಗಣ ಚಟುವಟಿಕೆಗಳಿಗೆ ಕಠಿಣ ಮಾರ್ಗಸೂಚಿ ರಚಿಸಲಾಗುತ್ತದೆ. ಹೊರಾಂಗಣ ಕಾರ್ಯಕ್ರಮಗಳಿಗೆ ಹೆಚ್ಚಿನ ನಿರ್ಬಂಧಗಳಿಲ್ಲ. ಆದರೆ ಈ ಕಾರ್ಯಕ್ರಮದಲ್ಲಿ ಕೊರೊನಾ ಮಾರ್ಗಸೂಚಿ ಉಲ್ಲಂಘನೆ ಮಾಡಿ ಅಧಿಕ ಜನರು ಸೇರುವುದನ್ನು ಸರ್ಕಾರ ಕಟ್ಟುನಿಟ್ಟಾಗಿ ನಿಯಂತ್ರಿಸಲಿದೆ'' ಎಂದು ತಿಳಿಸಿದರು.
ಇನ್ನು ರಾಜ್ಯ ವಿಧಾನಸಭೆ ಮತ್ತು ಲೋಕಸಭೆ ಮತದಾನದ ನಿಟ್ಟಿನಲ್ಲಿ ಅಧಿಕ ಜನರು ಸೇರುವ ಸಾಧ್ಯತೆ ಬಗ್ಗೆ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಹೊರಾಂಗಣ ಚಟುವಟಿಕೆಗಳಿಗೆ ಅಧಿಕ ನಿರ್ಬಂಧವೇನಿಲ್ಲ. ಮಾಸ್ಕ್ ಧರಿಸುವುದು ಮಾತ್ರ ಕಡ್ಡಾಯ ಎಂದೂ ಹೇಳಿದರು. ನಾವು ಈಗ ನಾಲ್ಕು ಗೋಡೆಗಳ ನಡುವೆ ನಡೆಯುವ ಅಧಿಕ ಜನರನ್ನು ಒಳಗೊಂಡ ಪಾರ್ಟಿ ಮೊದಲಾದವುಗಳ ಮೇಲೆ ಇದೆ. ಇದಕ್ಕೆ ನಿಯಂತ್ರಣ ಅನಿವಾರ್ಯ. ಇಂತಹ ಕಾರ್ಯಕ್ರಮದಿಂದಲೇ ಕೊರೊನಾ ನಿಯಮ ಉಲ್ಲಂಘಟನೆಯಾಗಿ ಗಂಭೀರ ಪರಿಣಾಮ ಉಂಟಾಗುತ್ತದೆ'' ಎಂದು ಹೇಳಿದರು.
ಇದೇ ವೇಳೆ, ''ಪ್ರಧಾನಿ ಮೋದಿ ಬೀದರ್, ಕಲಬುರ್ಗಿ, ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ವಿಶೇಷ ಗಮನ ವಹಿಸಿ ಮೈಕ್ರೋ ಕಂಟೈನ್ಮೆಂಟ್ ವಲಯಗಳನ್ನು ಅಧಿಕ ಮಾಡಲು ಸೂಚಿಸಿದ್ದಾರೆ ಕೊರೊನಾ ಚಿಕಿತ್ಸಾ ನಿರ್ವಹಣೆಯ ಮಾರ್ಗಸೂಚಿಗಳ ಪಾಲನೆ, ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, (ಟೆಸ್ಟ್, ಟ್ರಾಕ್, ಟ್ರೀಟ್) ಮಾದರಿ ತೀವ್ರಗೊಳಿಸಲು ಪ್ರಧಾನಿ ತಿಳಿಸಿದ್ದಾರೆ'' ಎಂದೂ ಮುಖ್ಯಮಂತ್ರಿ ಹೇಳಿದರು.
''ಕೇಂದ್ರದ ನಿಯಮದ ಪ್ರಕಾರ ಆರೋಗ್ಯ ಕೇಂದ್ರಗಳಲ್ಲಿ ಮಾತ್ರ ಲಸಿಕೆ ನೀಡಬಹುದು. ಆದರೆ ನಾವು ವೃದ್ಧಾಶ್ರಮ, ಅಪಾರ್ಟ್ಮೆಂಟ್, ದುರ್ಗಮ ಪ್ರದೇಶಗಳಲ್ಲೂ ಲಸಿಕೆ ಅಭಿಯಾನ ನಡೆಸಲು ಅವಕಾಶ ನೀಡಲು ಕೋರಿದ್ದೇವೆ. ರಾಜ್ಯದ 2,042 ಆಸ್ಪತ್ರೆಗಳು ಕೊರೊನಾ ಲಸಿಕೆಗೆ ನೊಂದಾಯಿಸಿದ್ದು ಈ ಪೈಕಿ, 1,439 ಆಸ್ಪತ್ರೆಗಳಲ್ಲಿ ಲಸಿಕೆ ಅಭಿಯಾನ ಆರಂಭಿಸಿಲ್ಲ. ಈ ಹಿನ್ನೆಲೆ ಈ ಆಸ್ಪತ್ರೆಗಳಲ್ಲೂ ಲಸಿಕೆ ಹಾಕಲು ಕ್ರಮ ವಹಿಸಲು ಪ್ರಧಾನಿ ಸೂಚಿಸಿದ್ದಾರೆ'' ಎಂದೂ ಸಿಎಂ ತಿಳಿಸಿದರು.