ರಾಜಸ್ಥಾನ, ಮಾ.17 (DaijiworldNews/PY): ಐಸಿಯುನಲ್ಲಿ ಮಲಗಿದ್ದ ಮಹಿಳೆಯೋರ್ವರ ಮೇಲೆ ವಾರ್ಡ್ಬಾಯ್ ಅತ್ಯಾಚಾರ ನಡೆಸಿದ ಘಟನೆ ಜೈಪುರದಲ್ಲಿರುವ ಶಲ್ಬೈ ಎಂಬ ಆಸ್ಪತ್ರೆಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಂತ್ರಸ್ತೆಯನ್ನು ಐಸಿಯುಗೆ ಶಿಫ್ಟ್ ಮಾಡಲಾಗಿದ್ದು, ಈ ಸಂದರ್ಭ ಮಹಿಳೆಯ ಮೇಲೆ ವಾರ್ಡ್ ಬಾಯ್ ಅತ್ಯಾಚಾರವೆಸಗಿದ್ದಾನೆ.
ಸಂತ್ರಸ್ತೆ ಮಹಿಳೆಯ ಕೈಗಳನ್ನು ಕಟ್ಟಿ ಹಾಕಲಾಗಿದ್ದು, ಮಹಿಳೆ ರಾತ್ರಿ ಪೂರ್ತಿ ಅತ್ತಿದ್ದಾಳೆ. ಈ ಘಟನೆಯ ಬಗ್ಗೆ ಸಂತ್ರಸ್ತೆ ಹೇಳಿಕೊಳ್ಳಲು ಮುಂದಾದ ಸಂದರ್ಭ ನರ್ಸ್ ಕೂಡಾ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ.
ಅನಾರೋಗ್ಯ ಹಿನ್ನೆಲೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರ ಸೂಚನೆಯ ಮೇರೆಗೆ ಆಪರೇಷನ್ ಕೂಡಾ ಮಾಡಲಾಗಿತ್ತು. ಆದರೆ, ಆಸ್ಪತ್ರೆಯ ಸಿಬ್ಬಂದಿ ಪತ್ನಿಯೊಂದಿಗೆ ಪತಿಗೆ ಇರಲು ಅವಕಾಶ ನೀಡದ ಕಾರಣ ಪತಿ ಮನೆಗೆ ತೆರಳಿದ್ದರು ಎನ್ನಲಾಗಿದೆ.
ಮುಂಜಾನೆ ವೇಳೆಗೆ ಮಹಿಳೆಯ ಪತಿ ಬರುತ್ತಿದ್ದಂತೆ ಘಟನೆಯ ಬಗ್ಗೆ ಅವರ ಬಳಿ ಹೇಳಿಕೊಂಡಿದ್ದಾರೆ. ಆದರೆ, ಮಹಿಳೆಗ ಮಾತನಾಡಲು ಸಾಧ್ಯವಾಗದ್ದರಿಂದ ಆಕೆ ಲಿಖಿತ ರೂಪದಲ್ಲಿ ಪತಿಗೆ ತಿಳಿಸಿದ್ದಾಳೆ.
"ಘಟನೆಯ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಕಲೆ ಹಾಕಿದ್ದಾರೆ. ಪೊಲೀಸರು ಆರೋಪಿಯನ್ನು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಆಗ್ರಾ ರಸ್ತೆಯ ನಿವಾಸಿಯಾಗಿದ್ದು, ತನಿಖೆ ಮುಂದುವರೆದಿದೆ" ಎಂದು ಡಿಸಿಪಿ ಪ್ರದೀಪ್ ಮೋಹನ್ ಶರ್ಮಾ ತಿಳಿಸಿದ್ದಾರೆ.