ನವದೆಹಲಿ, ಮಾ.17 (DaijiworldNews/MB) : ''ಕೊರೊನಾ ಪ್ರಕರಣಗಳು ಈಗ ಮತ್ತೆ ಏರಿಕೆ ಕಂಡಿರುವ ಹಿನ್ನೆಲೆ ಈಗ ಎರಡನೇ ಅಲೆಯ ಆತಂಕವಿದೆ. ಕೊರೊನಾ ಈಗ ಎರಡನೇ ಅಲೆಯ ಘಟ್ಟಕ್ಕೆ ತಲುಪಿದೆ. ಈ ಹಿನ್ನೆಲೆ ಎರಡನೇ ಅಲೆ ತಡೆಯಲು ತ್ವರಿತ ಕ್ರಮ ಅತ್ಯಗತ್ಯ. ಎರಡನೇ ಅಲೆ ನಿಯಂತ್ರಿಸದಿದ್ದರೆ ಶೀಘ್ರ ಕೊರೊನಾ ಸ್ಪೋಟವಾಗಲಿದೆ'' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದರು.
ಕೊರೊನಾ ಪ್ರಕರಣಗಳು ಈಗ ಮತ್ತೆ ಏರಿಕೆ ಕಂಡಿದೆ. ಈ ಕಾರಣದಿಂದಾಗಿ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಬುಧವಾರ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ನಡೆಸಿದ ಪ್ರಧಾನಿ ಮೋದಿಯವರು, ''ಈಗ ಕೊರೊನಾ ಎರಡನೇ ಅಲೆಯನ್ನು ತಡೆಯುವುದು ಅತೀ ಮುಖ್ಯ. ಇಲ್ಲವಾದರೆ ದೇಶದಲ್ಲಿ ಪ್ರಕರಣಗಳು ಉಲ್ಭಣವಾಗುತ್ತಲೇ ಇರುತ್ತದೆ. ಕಳೆದ ವರ್ಷ ನಾವು ಕೊರೊನಾದ ವಿರುದ್ದ ಹೋರಾಡಿದ ಆತ್ಮವಿಶ್ವಾಸವು ಅತಿಯಾದ ವಿಶ್ವಾಸವಾಗಬಾರದು. ಕಳೆದ ಬಾರಿಯ ನಮ್ಮ ಯಶಸ್ಸು ಈಗ ಅಜಾಗರೂಕತೆಗೆ ಕಾರಣವಾಗಬಾರದು'' ಎಂದು ಸಲಹೆ ನೀಡಿದರು.
''ಜನರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವಂತಹ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೆಯೇ ಸ್ವಚ್ಛೆತಗೂ ಆದ್ಯತೆ ನೀಡಬೇಕು. ಸರ್ಕಾರ ಜನರಲ್ಲಿ ಯಾವುದೇ ಆತಂಕ ಸೃಷ್ಟಿ ಮಾಡದೆಯೇ ಅಗತ್ಯ ಕ್ರಮ ಕೈಗೊಳ್ಳಬೇಕು'' ಎಂದು ತಿಳಿಸಿದರು.
''ಇನ್ನು ಈಗ ಲಸಿಕೆ ಅಭಿಯಾನ ಆರಂಭವಾಗಿರುವುದರಿಂದ ಜನರು ಲಸಿಕೆ ಪಡೆಯಲು ರಾಜ್ಯ ಸರ್ಕಾರ ಉತ್ತೇಜನೆ ನೀಡಬೇಕು. ಕೊರೊನಾ ಪ್ರಕರಣ ಪತ್ತೆಯಾದ ಕಂಟೆನ್ಮೆಂಟ್ ವಲಯಗಳಲ್ಲಿ ಚಿಕಿತ್ಸೆ ವೇಗ ಹೆಚ್ಚಿಸಬೇಕು. ಹಾಗೆಯೇ ಅಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಅಧಿಕ ಮಾಡಬೇಕು. ವಿದೇಶಿ ಪ್ರಯಾಣಿಕರ ಮೇಲೂ ನಿಗಾವಹಿಸಬೇಕು. ಕೊರೊನಾ ಲಸಿಕಾ ಕೇಂದ್ರಗಳನ್ನು ಕೂಡಾ ಹೆಚ್ಚಿಸಬೇಕು. ಲಸಿಕೆ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತಿಲ್ಲ. ಲಸಿಕೆ ವೇಸ್ಟ್ ಆಗದಂತೆಯೂ ನೋಡಿಕೊಳ್ಳಿ'' ಎಂದು ಸೂಚಿಸಿದರು. ಹಾಗೆಯೇ ''ಕೊರೊನಾ ಲಸಿಕೆ ಪಡೆದವರು ವೈದ್ಯರ ಸಲಹೆಯನ್ನು ತಪ್ಪದೇ ಪಾಲಿಸಬೇಕು'' ಎಂದೂ ತಿಳಿಸಿದರು.