ನವದೆಹಲಿ, ಮಾ.17 (DaijiworldNews/MB) : ತನ್ನ ತಾಯಿಯೊಂದಿಗೆ ವಾಗ್ವಾದ ನಡೆದ ವೇಳೆ ತೀವ್ರ ಕೋಪಗೊಂಡ ಪುತ್ರ ತಾಯಿಯ ಕೆನ್ನೆಗೆ ಬಾರಿಸಿದ್ದು ವೃದ್ದ ತಾಯಿ ನೆಲಕ್ಕೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದೆಹಲಿಯ ದ್ವಾರಕ ಏರಿಯಾದಲ್ಲಿ ನಡೆದಿದೆ.
ಮೃತ ಹಿರಿಯ ಮಹಿಳೆಯನ್ನು ಅವ್ತಾರ್ ಕೌರ್ (76) ಎಂದು ಗುರುತಿಸಲಾಗಿದೆ.
ನೆರೆ ಮನೆಯವರೊಂದಿಗಿನ ಪಾರ್ಕಿಂಗ್ ಸಮಸ್ಯೆಯ ಬಗ್ಗೆ ವೃದ್ದೆ ತನ್ನ ಪುತ್ರ ಹಾಗೂ ಸೊಸೆಯೊಂದಿಗೆ ಮಾತುಕತೆ ನಡೆಸಿದ ವೇಳೆ ವಾಗ್ವಾದ ನಡೆದಿದ್ದು ಕೋಪಗೊಂಡ ಪುತ್ರ ತಾಯಿಗೆ ಕಪಾಲಮೋಕ್ಷ ಮಾಡಿದ್ದು ತಾಯಿ ದಿಢೀರನ್ನೆ ಬಿದ್ದಿದ್ದಾರೆ. ಸೊಸೆಯು ಅತ್ತೆಯನ್ನು ಎದ್ದೇಳಿಸುವ ಯತ್ನ ಮಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ.
ವೃದ್ದೆಯನ್ನು ಕೂಡಲೇ ಅವರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದು ಆದರೆ ಅಷ್ಟರಲ್ಲೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಬಿಂದಾಪುರ್ ಪೊಲೀಸರು ಮೃತಳ ಮಗ 45 ವರ್ಷದ ರಣ್ಬಿರ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.