ಬೆಂಗಳೂರು, ಮಾ 17 (DaijiworldNews/MS): ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯ ಹಿಂದಿರುವ ‘ಮಹಾನಾಯಕ’ ಯಾರು ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಚರ್ಚೆಗೆ ಕಾರಣವಾಗಿದ್ದು, ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ಆರೋಪ - ಪ್ರತ್ಯಾರೋಪ ಮಾಡುತ್ತಿದೆ.
"ನನ್ನ ಮೇಲೆ ಹಿಂದಿನಿಂದಲೂ ಷಡ್ಯಂತ್ರಗಳು ನಡೆದುಕೊಂಡು ಬಂದಿವೆ. ಅವು ಈಗಲೂ ಮುಂದುವರಿದಿವೆ. ಸಿ.ಡಿ ಪ್ರಕರಣದಲ್ಲಿ ನನ್ನನ್ನು ಸುಖಾ ಸುಮ್ಮನೆ ಸಿಲುಕಿಸುವ ಪ್ರಯತ್ನ ನಡೆದಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾ.14ರ ಭಾನುವಾರ ಶಿವಮೊಗ್ಗದಲ್ಲಿ ಹೇಳಿದ್ದರು.
ಈ ನಡುವೆ ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಫೋಟೋವೊಂದನ್ನು ಪ್ರಕಟಿಸಿದ್ದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಡಿ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ನರೇಶ್ ಇಬ್ಬರೂ ಜೊತೆಗೆ ನಿಂತಿರುವ ಫೋಟೋವನ್ನು ಬಿಜೆಪಿ ಟ್ವೀಟ್ ಮಾಡಿದೆ.
"ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ಮಾಸ್ಟರ್ ಮೈಂಡ್ ಮತ್ತು ರಿಂಗ್ ಮಾಸ್ಟರ್ ಒಂದೇ ಫ್ರೇಮ್ನಲ್ಲಿ ಸಿಲುಕಿಕೊಂಡಿರುವುದಕ್ಕೂ, ನನ್ನನ್ನು ಸಿಲುಕಿಸುವ ಕುತಂತ್ರ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? ಎನ್ನುವ ಬರಹದೊಂದಿಗೆ ಈ ಫೋಟೋವನ್ನುಬಿಜೆಪಿ ಹಂಚಿಕೊಂಡಿದೆ.