ಲಕ್ನೋ, ಮಾ.17 (DaijiworldNews/MB) : ಉತ್ತರ ಪ್ರದೇಶದಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಉದ್ಯಮಿ ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿ ಅವರನ್ನು ವಿಸಿಟಿಂಗ್ ಪ್ರೊಫೆಸರ್ ಆಗಿ ನೇಮಕ ಮಾಡಿರುವುದಕ್ಕೆ ವಿದ್ಯಾರ್ಥಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಮಂಗಳವಾರ ಉಪ ಕುಲಪತಿ ರಾಕೇಶ್ ಭಟ್ನಾಗರ್ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ವಿಶ್ವವಿದ್ಯಾಲಯವನ್ನು "ಖಾಸಗೀಕರಣಗೊಳಿಸಬಾರದು" ಎಂದು ಒತ್ತಾಯಿಸಿದ್ದಾರೆ.
ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಸೇರಿದಂತೆ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದು ಅಂತಹ ಯಾವುದೇ ನಿರ್ಧಾರವನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ತಿಳಿಸಿ ವಿದ್ಯಾರ್ಥಿಗಳ ಮನವೊಲಿಸುವ ಯತ್ನ ಮಾಡಿದರು.
ಆದರೆ ಮಹಿಳಾ ಅಧ್ಯಯನ ಕೇಂದ್ರದ ಸಮನ್ವಯ ಅಧಿಕಾರಿ ನಿಧಿ ಶರ್ಮಾ ಅವರು, ''ಓರ್ವ ಮಹಿಳಾ ಉದ್ಯಮಿಯಾದ ನೀತಾ ಅಂಬಾನಿ ಅವರು ನಮ್ಮ ವಿವಿ ಸೇರಿದರೆ ಅವರ ಅನುಭವ ಹಂಚಿಕೊಳ್ಳುಬಹುದಾಗಿದೆ. ಇದರಿಂದಾಗಿ ಪೂರ್ವಾಂಚಲ ಭಾಗದ ಮಹಿಳೆಯರಿಗೆ ಉಪಕಾರಿಯಾಗಲಿದೆ. ಇದು ಮಹಿಳೆಯರಿಗೆ ಭವಿಷ್ಯದಲ್ಲಿ ಸ್ಫೂರ್ತಿ ನೀಡಲಿದೆ'' ಎಂದು ಹೇಳಿದ್ದಾರೆ.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು, ''ಶ್ರೀಮಂತ ವ್ಯಕ್ತಿಯ ಪತ್ನಿಯಾಗಿರುವುದು ದೊಡ್ಡ ಸಾಧನೆ ಏನಲ್ಲ. ಇಂತಹ ವ್ಯಕ್ತಿಗಳು ನಮಗೆ ಆದರ್ಶರಾಗಲು ಸಾಧ್ಯವಿಲ್ಲ. ಅಷ್ಟಕ್ಕೂ ಮಹಿಳಾ ಸಬಲೀಕರಣ ವಿಚಾರದ ಬಗ್ಗೆ ಮಾತನಾಡುವುದಾದರೆ ಅರುಣಿಮಾ ಸಿನ್ಹಾ, ಬಚೇಂದ್ರಿ ಪಾಲ್, ಮೇರಿ ಕೋಮ್ ಅಥವಾ ಕಿರಣ್ ಬೇಡಿಯಂತಹ ಮಹಿಳೆಯರನ್ನು ಈ ವಿವಿಗೆ ಆಹ್ವಾನ ಮಾಡಿ'' ಎಂದಿದ್ದಾರೆ.
ಏತನ್ಮಧ್ಯೆ ನೀತಾ ಅಂಬಾನಿ ಅವರನ್ನು ವಿಸಿಟಿಂಗ್ ಪ್ರೊಫೆಸರ್ ಆಗಿ ನೇಮಕ ಮಾಡಲಾಗಿದೆ ಎಂಬ ವರದಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬುಧವಾರ ಮಾರ್ಚ್ 17 ರಂದು ನಿರಾಕರಿಸಿದೆ. ನೀತಾ ಅಂಬಾನಿಗೆ ಬಿಎಚ್ಯುನಿಂದ ಆಹ್ವಾನ ಬಂದಿಲ್ಲ ಎಂದು ಆರ್ಐಎಲ್ ಸ್ಪಷ್ಟಪಡಿಸಿದೆ. "ನೀತಾ ಅಂಬಾನಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ವಿಸಿಟಿಂಗ್ ಉಪನ್ಯಾಸಕರಾಗಲಿದ್ದಾರೆ ಎಂಬ ವರದಿಗಳು ನಕಲಿ. ಅವರಿಗೆ ಬಿಎಚ್ಯುನಿಂದ ಆಹ್ವಾನ ಬಂದಿಲ್ಲ" ಎಂದು ಆರ್ಐಎಲ್ ಹೇಳಿದೆ.