ಬೆಂಗಳೂರು, ಮಾ 17 (DaijiworldNews/MS): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ಮಾರ್ಗ ಮಧ್ಯದಲ್ಲಿಯೇ ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ.
ಬೆಂಗಳೂರಿನಿಂದ ಜೈಪುರಕ್ಕೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮಾರ್ಗ ಮಧ್ಯೆ ಪ್ರಯಾಣಿಕ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿಯೇ ತಾಯಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ವಿಮಾನದಲ್ಲಿ ವೈದ್ಯರಾದ ಡಾ. ಸುಬಹಾನಾ ನಜೀರ್ ಕೂಡಾ ಪ್ರಯಾಣಿಸುತ್ತಿದ್ದು, ಅವರ ಸಹಾಯದೊಂದಿಗೆ ಇಂಡಿಗೊ ಏರ್ಲೈನ್ಸ್ ಸಿಬ್ಬಂದಿಗಳು ವಿಮಾನದಲ್ಲೇ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಮಹಿಳೆಗೆ ಹೆರಿಗೆ ನೋವು ಮತ್ತು ಹೆರಿಗೆಯಾಗಿರುವ ವಿಚಾರವನ್ನು ವಿಮಾನದ ಪೈಲಟ್, ಜೈಪುರ ಎಟಿಸಿಗೆ ಮಾಹಿತಿ ನೀಡಿದ್ದರು. ಹೀಗಾಗಿ, ಇಂಡಿಗೊ ಏರ್ಲೈನ್ಸ್ ಮತ್ತು ಜೈಪುರ ವಿಮಾನ ನಿಲ್ದಾಣದ ವೈದ್ಯಕೀಯ ತಂಡಗಳು ತಾಯಿ-ಮಗುವನ್ನು ಬರ ಮಾಡಿಕೊಳ್ಳಲು ಸಿದ್ಧವಾಗಿ ನಿಂತಿದ್ದವು.
ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ಉಪಚರಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಮಗು ಆರೋಗ್ಯದಿಂದಿದ್ದಾರೆ ಎಂದು ತಿಳಿದುಬಂದಿದೆ.