ಮೀರತ್, ಮಾ.17 (DaijiworldNews/MB) : ಪ್ರೀತಿಸಿದ ಅಂತರ್ ಧರ್ಮೀಯ ಯುವ ಜೋಡಿಯ ವಿವಾಹಕ್ಕೆ ಕುಟುಂಬಸ್ಥರು ಒಪ್ಪಲಿಲ್ಲವೆಂದು ಜೋಡಿಯು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಹೋಟೆಲ್ವೊಂದರಲ್ಲಿ ನಡೆದಿದೆ.
ಮೃತರನ್ನು ಹರಿಯಾಣದ ಸೋನೆಪತ್ ನಿವಾಸಿ ಸೋನು ಸಿಂಗ್ (20) ಮತ್ತು ಮೀರತ್ನ ಝಾಕಿರ್ ಕಾಲನಿ ನಿವಾಸಿ ಶುಮೈಲಾ (20) ಎಂದು ಗುರುತಿಸಲಾಗಿದೆ.
ನಗರದ ಲಿಸಾರಿ ಗೇಟ್ ಪ್ರದೇಶದಲ್ಲಿನ ತನ್ನ ತಾಯಿಯ ಮನೆಯಲ್ಲಿ ಸೋನು ವಾಸಿಸುತ್ತಿದ್ದನು. ಎರಡೂ ಕುಟುಂಬಗಳು ಇವರ ವಿವಾಹಕ್ಕೆ ಒಪ್ಪಿಗೆ ಸೂಚಿಸಿರಲಿಲಲ ಎಂದು ಮೀರತ್ ಎಸ್ಎಸ್ಪಿ ಅಜಯ್ ಸಾಹ್ನಿ ಹೇಳಿದ್ದಾರೆ.
ಜೋಡಿಯು ಶಾಸ್ತ್ರಿ ನಗರ ಪ್ರದೇಶದ ಮ್ಯಾಗ್ನಮ್ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿ ಅಲ್ಲಿಗೆ ತಲುಪಿದ ನಂತರ ವಿಷ ಸೇವಿಸಿದ್ದಾರೆ. ಯುವತಿ ತಕ್ಷಣವೇ ಸಾವನ್ನಪ್ಪಿದ್ದರೆ, ಸೋನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಒಂದು ದಿನದ ನಂತರ ಸಾವನ್ನಪ್ಪಿದ್ದಾನೆ.
ಅವರು ಪತಿ, ಪತ್ನಿ ಎಂದು ಹೇಳಿಕೊಂಡು ರೂಮ್ ಬುಕ್ ಮಾಡಿದ್ದರು. ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯಾವುದೇ ಡೆತ್ನೋಟ್ ಕಂಡುಬಂದಿಲ್ಲ ಎಂದು ಸಿಒ ದೇವೇಶ್ ಸಿಂಗ್ ತಿಳಿಸಿದ್ದಾರೆ.