ನವದೆಹಲಿ, ಮಾ 17 (DaijiworldNews/MS): ಬಿಜೆಪಿ ಸಂಸದ ರಾಮ್ ಸ್ವರೂಪ್ ಶರ್ಮಾ ದೆಹಲಿಯ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ದೆಹಲಿಯ ನಾರ್ತ್ ಅವೆನ್ಯೂ ನಲ್ಲಿರುವ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶರ್ಮಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಏತನ್ಮಧ್ಯೆ, ಶರ್ಮಾ ಸಾವಿನ ಬಗ್ಗೆ ತಿಳಿದ ನಂತರ ಭಾರತೀಯ ಜನತಾ ಪಕ್ಷವು ಇಂದು ಬೆಳಿಗ್ಗೆ ನಿಗದಿಯಾಗಿದ್ದ ತನ್ನ ಸಂಸದೀಯ ಪಕ್ಷದ ಸಭೆಯನ್ನು ರದ್ದುಗೊಳಿಸಿತು.
1958 ರಲ್ಲಿ ಹಿಮಾಚಲ ಪ್ರದೇಶದ ಮಾಂಡಿಯಲ್ಲಿ ಜನಿಸಿದ್ದ ಶರ್ಮಾ 2014 ರಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. 2019ರಲ್ಲಿ ನಡೆದ ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದರು. ವಿದೇಶಾಂಗ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯಲ್ಲೂ ಸೇವೆ ಸಲ್ಲಿಸಿದ್ದ ಶರ್ಮಾ. ಅವರು ಪತ್ನಿ ಮತ್ತು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, "ಬುಧವಾರ ಬೆಳಿಗ್ಗೆ ಅವರ ನಿವಾಸದ ಒಬ್ಬ ಸಿಬ್ಬಂದಿಯಿಂದ ದೂರವಾಣಿ ಕರೆ ಮೂಲಕ ವಿಚಾರ ತಿಳಿದುಬಂದಿದ್ದು, ಒಳಗಿನಿಂದ ಬಾಗಿಲು ಮುಚ್ಚಿದ ಕೋಣೆಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ