ನವದೆಹಲಿ, ಮಾ.17 (DaijiworldNews/MB) : ''ಚುನಾವಣೆಗಳು ಕೇವಲ ಮತದಾನದ ವಿಚಾರವಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವದ ಅವನತಿಯಾಗುತ್ತಿದೆ'' ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ, ''ಇರಾಕ್ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಮುಅಮ್ಮರ್ ಗಡಾಫಿ ಕೂಡ ಮತದಾನವನ್ನು ಗೆಲ್ಲುತ್ತಿದ್ದರು'' ಎಂದು ಹೇಳಿದ್ದಾರೆ.
"ಸದ್ದಾಂ ಹುಸೇನ್ ಮತ್ತು ಗಡಾಫಿ ಅವರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದ್ದರು, ಗೆಲ್ಲುತ್ತಿದ್ದರು. ಅಲ್ಲಿ ಮತದಾನವಿರಲಿಲ್ಲ ಎಂದಲ್ಲ ಆದರೆ ಆ ಮತವನ್ನು ರಕ್ಷಿಸಲು ಯಾವುದೇ ಸಾಂವಿಧಾನಿಕ ಚೌಕಟ್ಟು ಇರಲಿಲ್ಲ" ಎಂದು ರಾಹುಲ್ ಅಭಿಪ್ರಾಯಿಸಿದ್ದಾರೆ.
"ಚುನಾವಣೆಯು ಕೇವಲ ಜನರು ಹೋಗಿ ಮತದಾನ ಯಂತ್ರದಲ್ಲಿ ಗುಂಡಿಯನ್ನು ಒತ್ತುವುದಲ್ಲ. ಚುನಾವಣೆಯು ನಿರೂಪಣೆಯ ಕುರಿತದ್ದಾಗಿದೆ. ಚುನಾವಣೆಯು ದೇಶದಲ್ಲಿ ಸಂವಿಧಾನಿಲ ಚೌಕಟ್ಟು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳುವುದಾಗಿದೆ. ಚುನಾವಣೆಯು ನ್ಯಾಯಯುತವಾಗಿ ನಡೆಯುತ್ತಿದ್ದು, ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು. ಆದ್ದರಿಂದ ಮತದಾನದಲ್ಲಿ ಈ ಎಲ್ಲಾ ಅಂಶಗಳು ಮುಖ್ಯವಾಗಿದೆ'' ಎಂದು ಅವರು "ಪ್ರಜಾಪ್ರಭುತ್ವ ಮತ್ತು ಸಂವಾದ" ಕುರಿತು ಬ್ರೌನ್ ವಿಶ್ವವಿದ್ಯಾಲಯದ ಪ್ರೊಫೆಸರ್ ಅಶುತೋಷ್ ವರ್ಷಿಣಿ ಅವರೊಂದಿಗಿನ ಸಂವಾದದಲ್ಲಿ ಹೇಳಿದರು.
ಕೆಲವು ವಿದೇಶಿ ಗುಂಪುಗಳು ಮತ್ತು ಸಂಸ್ಥೆಗಳು ಭಾರತದ ಮೇಲೆ ಟೀಕೆ ಮಾಡಿದ ಬಗ್ಗೆ ಮಾತನಾಡಿದ ರಾಹುಲ್, "ಇದನ್ನು ಪ್ರಮಾಣೀಕರಿಸಲು ನಮಗೆ ವಿದೇಶಿ ಸಂಸ್ಥೆಗಳು ಅಗತ್ಯವಿಲ್ಲ. ಅವರು ಅವರದ್ದೆ ಅಭಿಪ್ರಾಯ ಹೊಂದಿದ್ದಾರೆ. ಆದರೆ ನಮಗೆ ಅವರಿಂದ ಯಾವ ಗುರುತು ಚೀಟಿ ಬೇಕಾಗಿಲ್ಲ. ಆದರೆ ಅವರು ಹೇಳುವುದು ಸರಿಯಾಗಿದೆ, ಪರಿಸ್ಥಿತಿ ಅವರು ಹೇಳುವುದಕ್ಕಿಂತಲೂ ಕೆಟ್ಟದಾಗಿದೆ'' ಎಂದರು.
''ಸಂಸತ್ತು, ನ್ಯಾಯಾಂಗ ಅಥವಾ ಮಾಧ್ಯಮವಾಗಲಿ, ಪ್ರಸ್ತುತ ಸರ್ಕಾರವು ಈ ಎಲ್ಲಾ ಸಂಸ್ಥೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ'' ಎಂದು ಅವರು ಆರೋಪಿಸಿದರು.
"ಕಾಂಗ್ರೆಸ್ನಲ್ಲಿ ಸುಮಾರು 20 ಜನರ ಗುಂಪು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದೆ. ಆದರೆ ಅವರು ಬಿಜೆಪಿ, ಬಿಎಸ್ಪಿ ಅಥವಾ ಟಿಎಂಸಿಯಲ್ಲಿ ಉಳಿಯಬಹುದು ಎಂದು ನೀವು ಭಾವಿಸುತ್ತೀರಾ. ಇಲ್ಲ, ಅವರು ಕಾಂಗ್ರೆಸ್ ಹೊರತುಪಡಿಸಿ ಬೇರೆ ಯಾವುದೇ ಪಕ್ಷದಲ್ಲಿ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ" ಎಂದು ಅವರು ಹೇಳಿದರು.
"ಬಿಜೆಪಿ ಅಥವಾ ಬಿಎಸ್ಪಿ ಅಥವಾ ಇತರ ಯಾವುದೇ ರಾಜಕೀಯ ಪಕ್ಷಗಳಿಗೆ ಚುನಾವಣೆಗಳಿವೆ ಆದರೆ ಕಾಂಗ್ರೆಸ್ಗೆ ದೊಡ್ಡ ಜವಾಬ್ದಾರಿ ಇದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ'' ಎಂದು ಕೂಡಾ ಹೇಳಿದ್ದಾರೆ.
''ಬಿಜೆಪಿ ಮತ್ತು ಆರ್ಎಸ್ಎಸ್ನ ದೊಡ್ಡ ಸಮಸ್ಯೆ ಎಂದರೆ ಅವರಿಗೆ ತಮ್ಮೊಳಗಿನ ವಿಚಾರವನ್ನು ನೋಡಿಕೊಳ್ಳುವ ಸಾಮರ್ಥ್ಯವಿಲ್ಲ'' ಎಂದು ರಾಹುಲ್ ಟೀಕಿಸಿದರು.