ಬೆಂಗಳೂರು, ಮಾ 17 (DaijiworldNews/MS): ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡಿದ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಪ್ರಕರಣದ ಆರೋಪ ಮಾಡಿದ್ದ ಯುವತಿ ಹಿತೇಶಾ ಚಂದ್ರಾನಿ ನಗರದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಜೊಮ್ಯಾಟೋ ಡೆಲಿವರಿ ಬಾಯ್ ಆಗಿರುವ ಕಾಮರಾಜ್ ಅವರು ಯುವತಿ ಹಿತೇಶಾ ಚಂದ್ರಾನಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುತ್ತಿದ್ದಂತೆಯೇ ಯುವತಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದಾಳೆ.
ಕೇಸ್ ದಾಖಲಾದ ಹಿನ್ನೆಲೆಯಲ್ಲಿ ಆರೋಪ ಮಾಡಿದ್ದ ಯುವತಿ ಹಿತೇಶಾ ಚಂದ್ರಾನಿ ಅವರನ್ನು ವಿಚಾರಣೆಗೆ ಹಾಜರಾಗಲು ಬರುವಂತೆ ಸಂಪರ್ಕಿಸಲು ಪ್ರಯತ್ನಿಸಿದ್ದೆವು. ಆದರೆ, ಯುವತಿ ನಗರದಿಂದ ಹೊರಹೋಗಿದ್ದು, ಮಹಾರಾಷ್ಟ್ರದಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಇದ್ದಾರೆಂದು ತಿಳಿದುಬಂದಿದೆ ಎಂದು ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರಕ್ಕೆ ಬಂದ ಕೂಡಲೇ ಹೇಳಿಕೆ ನೀಡುವಂತೆ ಯುವತಿ ಸೂಚನೆ ನೀಡಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರೆಯಲಿದೆ. ಯುವತಿ ಹೇಳಿಕೆ ನೀಡಲು ಬರದೇ ಹೋದರೆ, ಆಕೆಯನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಈಗಾಗಲೇಪ್ರಕರಣ ಸಂಬಂಧ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು ಮಾರ್ಚ್ 9 ರಂದು ನಡೆದ ಘಟನೆ ಸಂಬಂಧ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.
ಸೇವೆಯಿಂದ ವಜಾಗೊಂಡ ಫುಡ್ ಡೆಲಿವರಿ ಬಾಯ್ ಕಾಮರಾಜ್ ಅವರು, ಮಹಿಳೆ ಕಾಲಿನ ಚಪ್ಪಲಿ ತೆಗೆದು ಹೊಡೆದರು. ಕೋಪದಲ್ಲಿ ಹೊಡೆಯಲು ನಾನು ಕೈಯೆತ್ತಿದ್ದೆ ಆದರೆ, ಹೊಡೆದಿರಿಲಲ್ಲ. ಚಪ್ಪಲಿಯಲ್ಲಿ ನನಗೆ ಹೊಡೆಯುವಾಗ ಆಕೆಯ ಉಂಗುರ ಆಕೆಯ ಮೂಗಿಗೆ ತಗುಲಿತ್ತು. ಆದರೆ, ಮಹಿಳೆ ನಾನೇ ಹೊಡೆದೆ ಎಂದು ದೊಡ್ಡ ಸುದ್ದಿ ಮಾಡಿದರು ಎಂದು ದೂರಿದ್ದಾರೆ.
ಮಾರ್ಚ್ 9 ರಂಂದು ಘಟನೆ ನಡೆದಿತ್ತು. ದೊಡ್ಡತಗೂರು ಪ್ರದೇಶದ 31 ವರ್ಷದ ಯುವತಿ ಹಿತೇಶಾ ಚಂದ್ರಾನೀ ಜೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಪಂಚ್ ಮಾಡಿದ್ದ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು. ಅದಾದ ಮರುದಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿದ್ದರು.