ಬೆಂಗಳೂರು ಮಾ 17 (DaijiworldNews/MS): ರಾಜ್ಯ ರಾಜಕೀಯಲ್ಲಿ ತಲ್ಲಣ ಸೃಷ್ಟಿಸಿದ್ದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಮತ್ತೊಂದು ಮಹತ್ವದ ಟ್ವಿಸ್ಟ್ ಸಿಕ್ಕಿದ್ದು ತಮ್ಮ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಯುವತಿಯ ತಂದೆ ಬೆಳಗಾವಿಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಳಗಾವಿಯ ನಗರದ ನಿವಾಸಿಗಳಾದ ಪಾಲಕರು , ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಮಾರ್ಚ್ 2ರಂದು ಬೆಂಗಳೂರಿನಲ್ಲಿ ಕಿಡ್ನಾಪ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
"ಪುತ್ರಿ ಬೆಂಗಳೂರಿನ ಸಾಪ್ಟ್ ವೇರ್ ಕಂಪನಿಯ ಉದ್ಯೋಗಿಯಾಗಿದ್ದು ಪಿಜಿಯಲ್ಲಿ ವಾಸವಾಗಿದ್ದಳು. ಕೆಲವು ದಿನಗಳ ಹಿಂದೆ ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವೀಡಿಯೋ ಹರಿಯಬಿಡಲಾಗಿದೆ ಮಗಳಂತೆ ಕಾಣುವ ವ್ಯಕ್ತಿಯನ್ನು ಕಂಡು ಭಯ ಆಯಿತು. ಈ ಬಗ್ಗೆ ಆಕೆಗೆ ಕರೆ ಮಾಡಿ ವಿಚಾರಿಸಿದಾಗ ನಾನೆಲ್ಲಿದ್ದೀನಿ ಎನ್ನುವುದೂ ಗೊತ್ತಿಲ್ಲ, ನನ್ನ ಜೀವಕ್ಕೆ ಅಪಾಯವಿದೆ. ಅದು ನನ್ನಂತೆ ಕಾಣುವ ಹುಡುಗಿಯ ಫೋಟೋ ಎಡಿಟ್ ಮಾಡಿ ಸಿಡಿ ರಿಲೀಸ್ ಮಾಡಿದ್ದಾರೆ ಎಂದಿದ್ದಳು. ಅದು ನಕಲಿ ಸಿಡಿ ಎಂದು ಸಾಬೀತಾದ ಬಳಿಕ ಮನೆಗೆ ಬರುತ್ತೇನೆ" ಎಂದಿದ್ದಳು.
"ನನ್ನ ಮಗಳಿಗೆ ಕರೆ ಮಾಡಿದಾಗ ಆಕೆ ಭಯದಿಂದ ಮಾತನಾಡುತ್ತಿದ್ದಳು.ಯಾರೋ ಅವಳನ್ನುಅಪಹರಿಸಿ ಒತ್ತಾಯಪೂರ್ವಕವಾಗಿ ಅವಳ ವಿಡಿಯೋ ಮಾಡಿ ಹರಿಯಬಿಟ್ಟಿದ್ದಾರೆ ಎಂಬ ಅನುಮಾನವಿದೆ. ಮಗಳಿಗೆ ರಕ್ಷಣೆ ನೀಡಿ ಆಕೆಯನ್ನು ಹುಡುಕಿ ಕೊಡಬೇಕು" ಎಂದು ದೂರಿನಲ್ಲಿ ತಿಳಿಸಿದ್ದಾರೆ.