ನವದೆಹಲಿ, ಮಾ. 16 (DaijiworldNews/SM): ಮಾರಾಠಿ ಭಾಷೆಯನ್ನಾಡುವ ಜನರ ಪ್ರಾಬಲ್ಯದ ಕರ್ನಾಟಕದಲ್ಲಿರುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸುವ ಯಾವುದೇ ಪ್ರಸ್ತಾವವನ್ನು ಕೇಂದ್ರ ಸರಕಾರ ಹೊಂದಿಲ್ಲ ಎಂದು ಲೋಕಸಭೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಗಡಿ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲು ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವ್ಯಕ್ತಿಗಳಿಂದ ಆಗಿಂದ್ದಾಗೆ ಬೇಡಿಕೆಗಳು ಬರುತ್ತಿದೆ. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕೇಂದ್ರ ಸರಕಾರವೂ ಕೂಡ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಂತೆ ಟ್ವಿಟರ್ ಮೂಲಕವೂ ಕೂಡ ರಾಜ್ಯ ಬಿಜೆಪಿ ಪ್ರತಿಕ್ರಿಯಿಸಿದೆ. ಬೆಳಗಾವಿ ಯಾವಾಗಲೂ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕಾಂಗ್ರೆಸ್ ಮತ್ತು ಶಿವಸೇನಾ ತಮ್ಮ ಸ್ವಂತ ವೈಫಲ್ಯಗಳನ್ನು ಮರೆ ಮಾಚಲು ಅಲ್ಪತನದ ರಾಜಕೀಯ ಮಾಡುತ್ತಿದೆ. ಅವುಗಳನ್ನು ನಿಲ್ಲಿಸಲು ಇದು ಸೂಕ್ತ ಸಂದರ್ಭವಾಗಿದೆ ಎಂದು ಹೇಳಿದ್ದಾರೆ.