ನವದೆಹಲಿ, ಮಾ.16 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಉತ್ತರ ಪ್ರದೇಶದ ನೋಯ್ಡಾ ಮತ್ತು ದೆಹಲಿ ನಡುವಿನ ಗಡಿಯನ್ನು ಬಂದ್ ಮಾಡುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ನಾವು ದೆಹಲಿ-ನೋಯ್ಡಾ ಗಡಿಯನ್ನು ನಿರ್ಬಂಧಿಸುತ್ತೇವೆ. ಸಮಿತಿ ಇನ್ನೂ ದಿನಾಂಕವನ್ನು ನಿರ್ಧರಿಸಿಲ್ಲ" ಎಂದು ತಿಳಿಸಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಸಮಿತಿ 40ಕ್ಕೂ ಹೆಚ್ಚು ರೈತ ಸಂಘಟನೆಗಳ ಒಕ್ಕೂಟವಾಗಿದ್ದು, ಕಳೆದ ವರ್ಷ ನವೆಂಬರ್ 26ರಿಂದ ದೆಹಲಿಯ ಗಡಿಭಾಗದಲ್ಲಿ ಮೂರು ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಇನ್ನು ಜನವರಿ 26 ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ರೈತರು ಮತ್ತು ದೆಹಲಿ ಪೊಲೀಸರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ ರೈತರು ಜನವರಿ 27ರಂದು ದೆಹಲಿ ಮತ್ತು ನೋಯ್ಡಾ ಚಿಲ್ಲಾ ಗಡಿಯನ್ನು ತೆರವುಗೊಳಿಸಿದರು ಎನ್ನಲಾಗಿದೆ.