ಬೆಂಗಳೂರು, ಮಾ. 16 (DaijiworldNews/MB) : ಬಿಜೆಪಿ, ಕಾಂಗ್ರೆಸ್ ನಡುವೆ ಟ್ವೀಟ್ ವಾರ್ ನಡೆಯುತ್ತಲೇ ಇದ್ದು, ''ಬಿಜೆಪಿ ವಾಟ್ಸಾಪ್ ಯುನಿವರ್ಸಿಟಿಯಲ್ಲೇ ಹುಟ್ಟಿ ಬೆಳೆದಿದೆ. ನಳಿನ್ ಕುಮಾರ್ ಕಟೀಲ್ ಅವರೇ ಈ ಟ್ವೀಟ್ ಅಳಿಸಿ ಕ್ಷಮೆ ಕೇಳದೇ ಹೋದಲ್ಲಿ ಮತ್ತೊಮ್ಮೆ ಕಾನೂನು ಕ್ರಮ ಕೈಗೊಳ್ಳಲ್ಲಿದ್ದೇವೆ'' ಎಂದು ಎಚ್ಚರಿಕೆ ನೀಡಿದೆ.
ಬಾಟ್ಲಾ 2008ರ ಬಾಟ್ಲಾ ಹೌಸ್ ಎನ್ಕೌಂಟರ್ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಹಚರ ಅರಿಜ್ ಖಾನ್ ಅಲಿಯಾಸ್ ಜುನೈದ್ಗೆ ಗಲ್ಲು ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ತೀರ್ಪು ನೀಡಿರುವ ಬಗ್ಗೆ ಉಲ್ಲೇಖ ಮಾಡಿ ಟ್ವೀಟ್ ಮಾಡಿದ್ದ, ಯಾವ ಭಯೋತ್ಪಾದಕನಿಗಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಣ್ಣೀರು ಹಾಕಿದ್ದರೋ ಅವನಿಗೆ ಗಲ್ಲು ಶಿಕ್ಷ ನ್ಯಾಯಾಲಯ ವಿಧಿಸಿದೆ ಎಂಬ ಸುದ್ದಿಯೊಂದನ್ನು ಉಲ್ಲೇಖಿಸಿತ್ತು. ಹಾಗೆಯೇ ಅರಿಜ್ ಖಾನ್ಗಾಗಿ ಸೋನಿಯಾ ಗಾಂಧಿ ಕಣ್ಣೀರು ಹಾಕುವುದನ್ನು ನೋಡಲು ಕಾಯುತ್ತಿದ್ದೇವೆ ಎಂದು ಕೂಡಾ ಹೇಳಿತ್ತು.
ಈ ವಿಚಾರಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ತಿರುಗೇಟು ನೀಡಿರುವ ಕಾಂಗ್ರೆಸ್, ''ವಾಟ್ಸಾಪ್ ಯುನಿವರ್ಸಿಟಿಯಲ್ಲೇ ಹುಟ್ಟಿ ಬೆಳೆದ ಬಿಜೆಪಿ, ವಿಪಕ್ಷ ನಾಯಕರ ತೇಜೋವಧೆಗಾಗಿ ನೀಚ ಮಟ್ಟಕ್ಕಿಳಿದು ಸುಳ್ಳು, ಅಪಪ್ರಚಾರಗಳ "ಫೇಕ್ ಫ್ಯಾಕ್ಟರಿ" ಎಂಬ ಕುಖ್ಯಾತಿ ಪಡೆದಿದ್ದೀರಿ. ಈ ವಿಕೃತಿಗಳನ್ನು ಸಹಿಸಲಾಗದು'' ಎಂದು ಹೇಳಿದೆ. ಹಾಗೆಯೇ', ''ನಳಿನ್ ಕುಮಾರ್ ಕಟೀಲ್ ಅವರೇ ಈ ಟ್ವೀಟ್ ಅಳಿಸಿ ಕ್ಷಮೆ ಕೇಳದೇ ಹೋದಲ್ಲಿ ಮತ್ತೊಮ್ಮೆ ಕಾನೂನು ಕ್ರಮ ಕೈಗೊಳ್ಳಲ್ಲಿದ್ದೇವೆ'' ಎಂದು ಎಚ್ಚರಿಕೆಯನ್ನು ನೀಡಿದೆ.
2008ರ ಸೆಪ್ಟೆಂಬರ್ 13ರಂದು ದೆಹಲಿಯಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 39 ಮಂದಿ ಸಾವಿಗೀಡಾಗಿದ್ದರು ಮತ್ತು 159 ಮಂದಿ ಗಾಯಗೊಂಡಿದ್ದರು. ಬಳಿಕ, ಸೆಪ್ಟೆಂಬರ್ 19ರಂದು ದಕ್ಷಿಣ ದೆಹಲಿಯ ಜಮಿಯಾ ನಗರದಲ್ಲಿ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್ಕೌಂಟರ್ನಲ್ಲಿ ಇನ್ಸ್ಪೆಕ್ಟರ್ ಶರ್ಮಾ ಹುತಾತ್ಮರಾಗಿದ್ದರು. ಎನ್ಕೌಂಟರ್ ಸ್ಥಳದಿಂದ ಪರಾರಿಯಾಗಿದ್ದ ಅರಿಜ್ ಖಾನ್ನನ್ನು 2009ರಲ್ಲಿ ಘೋಷಿತ ಅಪರಾಧಿ ಎಂದು ಪ್ರಕಟಿಸಲಾಗಿತ್ತು. ಬಳಿಕ, 2018ರ ಫೆಬ್ರುವರಿ 14ರಂದು ಈತನನ್ನು ಬಂಧಿಸಲಾಗಿತ್ತು. ಆದರೆ ಬಾಟ್ಲಾ ಹೌಸ್ ಎನ್ಕೌಂಟರ್ ನಕಲಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಆದರೆ, ಈ ಹೇಳಿಕೆಯಿಂದ ದೂರ ಉಳಿಯುವುದಾಗಿ ಕಾಂಗ್ರೆಸ್ ಹೇಳಿತ್ತು. ಎನ್ಕೌಂಟರ್ ಚಿತ್ರಗಳನ್ನು ನೋಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಣ್ಣೀರು ಹಾಕಿದ್ದರು ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯೂ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು.