ಬೆಂಗಳೂರು,ಮಾ.16 (DaijiworldNews/HR): ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣ ದಿನೇ ದಿನೇ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ಟ್ವೀಟ್ ವಾರ್ ಆರಂಭಿಸಿದೆ ಎನ್ನಲಾಗಿದೆ.
ಜಾರಕಿಹೊಳಿ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿ, "ನನ್ನ ವಿರುದ್ಧ ಹಿಂದೆ ಮಾಡಿದ್ದ ಷಡ್ಯಂತ್ರಗಳು ಈಗಲೂ ಮುಂದುವರೀತಾ ಇದೆ. ಸಿಡಿ ಪ್ರಕರಣದಲ್ಲೂ ನನ್ನನ್ನು ಸಿಲುಕಿಸಲು ನೋಡುತ್ತಿದ್ದಾರೆ ಎಂದಿದ್ದು, ಇನ್ನೊಂದೆಡೆ ಹುಬ್ಬಳ್ಳಿಯಲ್ಲಿ ಕೆಲ ದಿನಗಳ ಹಿಂದೆ ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಿಡಿ ಪ್ರಕರಣದಲ್ಲಿ ನನ್ನ ಹೆಸರು ತರೋದು ಏಕೆ ಎಂದು ಪ್ರಶ್ನಿಸಿದ್ದರು.
ಇನ್ನು ಇವರಿಬ್ಬರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, "ನನ್ನನ್ನು ಸಿಲುಕಿಸುವ ಕುತಂತ್ರ ನಡೆಯುತ್ತಿದೆ ಎಂದು ಮಹಾನಾಯಕರೊಬ್ಬರು ಹೇಳಿದ್ದಾರೆ. ಈ ಪ್ರಕರಣದಲ್ಲಿ ನನ್ನ ಹೆಸರು ಯಾಕೆ ಬರುತ್ತಿದೆ. ಗೊತ್ತಾಗುತ್ತಿಲ್ಲ ಎಂದು ಮಹಾನಾಯಕಿಯೊಬ್ಬರು ಹೇಳಿದ್ದಾರೆ. ಏನಿದೆಲ್ಲಾ? ಬೆಂಕಿಯಿಲ್ಲದೆ ಹೊಗೆಯಾಡುವುದೇ? ಎಂದು ಪ್ರಶ್ನಿಸಿದ್ದು, ಪಕ್ಷ ತೊರೆದವರ ವಿರುದ್ಧ ಕಾಂಗ್ರೆಸ್ ಹಗೆತನ ಸಾಧಿಸುತ್ತಿದೆ" ಎಂದು ಟ್ವಿಟರ್ ನಲ್ಲಿ ಆರೋಪಿಸಿದೆ.
ಇದಕ್ಕೆ ಉತ್ತರಿಸಿರುವ ಕಾಂಗ್ರೆಸ್, "ಜೈಲಿನಿಂದ ಜಾಮೀನಿನ ಮೇಲೆ ಹೊರಬಂದಿರುವ ಭ್ರಷ್ಟಾಚಾರ ಆರೋಪಿ ಮಹಾ ನಾಯಕ ಎನ್ನುತ್ತ ಯಡಿಯೂರಪ್ಪ ಅವರತ್ತ ಏಕೆ ಪರೋಕ್ಷವಾಗಿ ಗುರಿ ಇಡುತ್ತಿದ್ದೀರಿ?, ಶಾಸಕ ಯತ್ನಾಳ ಹೇಳಿದಂತೆ ವಿಜಯೇಂದ್ರ ಸಿಡಿ ಫ್ಯಾಕ್ಟರಿ ಮೂಲಕ ಬ್ಲಾಕ್ಮೇಲ್ ಮಾಡಲಾಗುತ್ತದೆ ಎಂಬ ಮಾತನ್ನ ನೀವೂ ಪರೋಕ್ಷವಾಗಿ ಹೇಳುತ್ತಾ ಬಿಎಸ್ವೈ ಮುಕ್ತ ಬಿಜೆಪಿ ಅಭಿಯಾನ ಮುಂದುವರೆಸುತ್ತಿರುವಿರಾ!" ಎಂದು ತಿರುಗೇಟು ನೀಡಿದೆ.