ಬೆಂಗಳೂರು, ಮಾ. 16 (DaijiworldNews/MB) : ವಿಧಾನಮಂಡಲ ಅಧಿವೇಶನ ಸಂದರ್ಭ ಗದ್ದಲ ಉಂಟಾಗಿದ್ದು ಕಾಂಗ್ರೆಸ್ ಸದಸ್ಯ ಪರಮೇಶ್ವರ್ ನಾಯ್ಕ್ ವಿರುದ್ಧ ಸ್ಪೀಕರ್ ಕಾಗೇರಿ ಗರಂ ಆದರು. ಪರಮೇಶ್ವರ್ ನಾಯ್ಕ್ ಅವರು ರಾಸಲೀಲೆ ಸಿಡಿ ಬಿಡುಗಡೆ ಪ್ರಕರಣ ಹಾಗೂ ಸಚಿವರು ಕೋರ್ಟ್ ಮೆಟ್ಟಿಲೇರಿದ ಬಗ್ಗೆ ವಿಧಾನಸಭೆ ಪ್ರಶ್ನೋತ್ತರ ಕಲಾಪದ ವೇಳೆ ಉಲ್ಲೇಖಿಸಿದ್ದು ಈ ವೇಳೆ ಸದನದಲ್ಲಿ ಬಿಜೆಪಿ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ನಡೆದಿದೆ.
ಈ ವೇಳೆ ಸ್ಪೀಕರ್ ಕಾಗೇರಿ ಮಧ್ಯಪ್ರವೇಶ ಮಾಡಿದ್ದು ಪರಮೇಶ್ವರ್ ನಾಯ್ಕ್ರನ್ನು ಕುಳಿತುಕೊಳ್ಳುವಂತೆ ಸೂಚನೆ ನೀಡಿದರು. ಆದರೆ ಇದಕ್ಕೆ ಕಿವಿಗೊಡದ ಪರಮೇಶ್ವರ್ ನಾಯ್ಕ್ ಬಿಜೆಪಿ ಸದಸ್ಯರೊಂದಿಗೆ ವಾಕ್ಸಮರ ನಡೆಸುತ್ತಲೇ ಇದ್ದರು. ಈ ಸಂದರ್ಭ ಸ್ಪೀಕರ್ ಗರಂ ಆಗಿದ್ದು ಎದ್ದು ನಿಂತು ಮಾತನಾಡಿ, ''ಈವರೆಗೂ ಪೀಠದಿಂದ ಎದ್ದು ನಿಂತವನಲ್ಲ ನಾನು ಮೊದಲ ಬಾರಿಗೆ ನಾನು ನಿಲ್ಲುವಂತೆ ಆಯಿತು'' ಎಂದು ಹೇಳಿದ್ದಾರೆ.
''ಸದನವೆಂದರೆ ತಮಾಷೆಯೇ? ಹೇಳಿದ್ದನ್ನು ಕೇಳುವ ಸೌಜನ್ಯವೂ ನಿಮಗಿಲ್ಲವೇ?'' ಎಂದು ಪ್ರಶ್ನಿಸಿದ ಅವರು, ''ನಿಮ್ಮನ್ನು ಲಕ್ಷಾಂತರ ಮಂದಿ ಮತ ಹಾಕಿ ಇಲ್ಲಿಗೆ ಬರುವಂತೆ ಮಾಡಿದ್ದಾರೆ. ಅವರ ಮಾತುಗಳನ್ನು ಇಲ್ಲಿ ಹೇಳುವುದು ಬಿಟ್ಟು ನಿಮ್ಮದು ಹುಡುಗಾಟವೇ ಆಯಿತು'' ಎಂದು ಸಚಿವರುಗಳ ವಿರುದ್ದ ಕಿಡಿಕಾರಿದರು.
ನಂತರ ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಮಾತನಾಡಿ, ''ನಿಮಗೆ ನೋವಾಗಿದ್ದರೆ ಕ್ಷಮಿಸಿ. ಆದರೆ ಪಾಪ ಪರಮೇಶ್ವರ್ ನಾಯ್ಕ್ ತಪ್ಪು ಮಾಡಿಲ್ಲ'' ಎಂದು ಹೇಳಿದ್ದು, ಆ ಬಳಿಕ ಪರಮೇಶ್ವರ್ ನಾಯ್ಕ್ ಅವರು ಕೂಡಾ ಕ್ಷಮೆಯಾಚಿಸಿದರು.