ತಿರುವನಂತಪುರ, ಮಾ16 (DaijiworldNews/MS): ಮುಂಬರುವ ವಿಧಾನಸಭಾ ಚುನಾವಣೆಗೆ ಕಣ್ಣೂರು ಜಿಲ್ಲೆಯ ಧರ್ಮದಂ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಓಟ್ಟು ಆಸ್ತಿ 54 ಲಕ್ಷ ರೂ. ಎಂದು ಘೋಷಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನ ಪ್ರಕಾರ 2020-21ರ ಆರ್ಥಿಕ ವರ್ಷದ ಆದಾಯವು 2.87 ಲಕ್ಷ ರೂ. ಆಗಿದೆ. ಯಾವುದೇ ಸ್ವಂತ ವಾಹನವಿಲ್ಲ, ಎರಡು ಮನೆಗಳನ್ನು ಹೊಂದಿದ್ದು 51.95 ಲಕ್ಷ ರೂ.ಗಳ ಸ್ಥಿರ ಆಸ್ತಿ ಮತ್ತು 2.04 ಲಕ್ಷ ಮೌಲ್ಯದ ಚರ ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಿದ್ದಾರೆ.
ನಿವೃತ್ತ ಶಿಕ್ಷಕಿಯಾಗಿರುವ ಪತ್ನಿ ಕಮಲಾ, 35 ಲಕ್ಷ ರೂ.ಗಳ ಸ್ಥಿರ ಆಸ್ತಿ ಮತ್ತು 29.7 ಲಕ್ಷ ರೂ. ಚರ ಆಸ್ತಿಯನ್ನು ಹೊಂದಿದ್ದು, ಇಬ್ಬರೂ ಯಾವುದೇ ಸಾಲವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಸಿಎಂ ಅವರ ಹೆಸರಿನಲ್ಲಿ ಚಿನ್ನದ ಆಭರಣಗಳಿಲ್ಲ, ಆದರೆ ಅವರ ಪತ್ನಿ ಕಮಲಾ ಅವರು 3.3 ಲಕ್ಷ ರೂಪಾಯಿ ಮೌಲ್ಯದ 80 ಗ್ರಾಂ ಚಿನ್ನಾಭರಣಗಳನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ. ಪಿನರಾಯಿ ಕಣ್ಣೂರಿನಲ್ಲಿರುವ ಜಮೀನಿನಲ್ಲಿ 0.78 ಎಕರೆ ಆನುವಂಶಿಕವಲ್ಲದ ಕೃಷಿ ಭೂಮಿ ಹಾಗೂ 2 ಮನೆಗಳನ್ನು ಹೊಂದಿದ್ದಾರೆ.
2016-17ರಿಂದ 2020-21ರವರೆಗೆ ಮುಖ್ಯಮಂತ್ರಿಯವರ ವಾರ್ಷಿಕ ಆದಾಯವು 2 ಲಕ್ಷದಿಂದ 3 ಲಕ್ಷ ರೂ.ಗಳವರೆಗೆ ಇದ್ದು, 2018-19ರಲ್ಲಿ ಅತಿ ಹೆಚ್ಚು ಅಂದರೆ 3.40 ಆಗಿತ್ತು ಎಂದು ತಿಳಿಸಿದ್ದಾರೆ.