ಕೋಲ್ಕತ್ತಾ, ಮಾ. 16 (DaijiworldNews/MB) : ''ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತನಾಡದ ಕೇಂದ್ರ ಸಚಿವರುಗಳು ಇಲ್ಲಿ ಬಂಗಾಳದಲ್ಲಿ ಹೊಟೇಲ್ ಬುಕ್ ಮಾಡಿ ಅಲ್ಲಿ ಕೂತು ನನ್ನನ್ನು ಹತ್ಯೆ ಮಾಡಲು ಸಂಚು ಮಾಡುತ್ತಿದ್ದಾರೆ'' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಪ್ರಚಾರವು ಬಿರುಸಿನಿಂದ ಸಾಗುತ್ತಿದ್ದು ಬಂಕುರಾದಲ್ಲಿ ನಡೆದ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ''ರೈತರು ಆರು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಅವರೊಂದಿಗೆ ಯಾವುದೇ ಮಾತುಕತೆ ನಡೆಸದ ಕೇಂದ್ರದ ಸಚಿವರುಗಳು ಬಂಗಾಳದಲ್ಲಿ ಹೊಟೇಲ್ ಬುಕ್ ಮಾಡಿ ಕುಳಿತಿದ್ದಾರೆ. ನನ್ನನ್ನು ಹತ್ಯೆ ಮಾಡುವ ಹಾಗೂ ಟಿಎಂಸಿಯನ್ನು ನಾಶ ಮಾಡುವ ವಿಚಾರವನ್ನೇ ಅಲ್ಲಿ ಚರ್ಚಿಸುತ್ತಿದ್ದಾರೆ'' ಎಂದು ದೂರಿದರು.
''ಜನರು ಬಿಜೆಪಿ ಸಭೆಗೆ ಏಕೆ ಬರುವುದಿಲ್ಲವೆಂದು ಬಿಜೆಪಿ ನಾಯಕರು ನಿನ್ನೆ ರಾತ್ರಿ ಸಭೆ ನಡೆಸಿದ್ದಾರೆ. ಆದರೆ ಇದಕ್ಕೆ ನಾನು ಏನು ಮಾಡಲು ಸಾಧ್ಯ. ಇದಕ್ಕೆ ನೀವು ಜನರ ಮೇಲೆ ಮಾಡುತ್ತಿರುವ ದೌರ್ಜನ್ಯವೇ ಕಾರಣ'' ಎಂದು ಹೇಳಿದ್ದು, ''ಬಿಜೆಪಿಯ ಸಚಿವರುಗಳು ಚುನಾವಣಾ ಆಯೋಗವನ್ನು ಬಳಸಿಕೊಂಡು ಟಿಎಂಸಿ ವಿರುದ್ದ ಯಾವೆಲ್ಲಾ ಪ್ರಕರಣಗಳನ್ನು ದಾಖಲು ಮಾಡಬಹುದು ಎಂದು ಸಂಚು ಹೂಡುತ್ತಿದ್ದಾರೆ'' ಎಂದು ಕೂಡಾ ಆರೋಪಿಸಿದರು.
ಕೆಲ ದಿನಗಳ ಹಿಂದೆ ಪ್ರಚಾರದ ವೇಳೆ ದೀದಿ ಕಾಲಿಗೆ ಗಾಯವಾಗಿದ್ದು, ನನ್ನನ್ನು ಯಾರೋ ತಳ್ಳಿದ್ದಾರೆ ಎಂದು ಅವರು ದೂರಿದ್ದರು. ಆದರೆ ಇದನ್ನು ಅಲ್ಲಗಳೆದಿರುವ ಚುನಾವಣಾ ಆಯೋಗ ಇದು ಬರೀ ಅಪಘಾತವಷ್ಟೇ ಎಂದು ಹೇಳಿದೆ. ಪ್ರಸ್ತುತ ದೀದಿ ವೀಲ್ಚೇರ್ನಲ್ಲಿ ಕೂತೇ ಪ್ರಚಾರ ನಡೆಸುತ್ತಿದ್ದಾರೆ.