ತಿರುವನಂತಪುರ, ಮಾ16 (DaijiworldNews/MS): ಕೇರಳ ಕಾಂಗ್ರೆಸ್ ನ ಮಾಜಿ ನಾಯಕ ಪಿಸಿ ಚಾಕೊ ಅವರು ಮಂಗಳವಾರ ಸಂಜೆ ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ (ಎನ್ಸಿಪಿ) ಸೇರ್ಪಡೆಯಾಗಲಿದ್ದಾರೆ. ಈ ವಿಚಾರವನ್ನು ಖಚಿತಪಡಿಸಿರುವ ಅವರು ಎನ್ಸಿಪಿಯೊಂದಿಗೆ ಕೇರಳದಲ್ಲಿ ಕೆಲಸ ಮಾಡಲು ಉತ್ಸುಕನಾಗಿದ್ದೇನೆ. ಅದೇ ರೀತಿ ಸಿಪಿಎಂ ನ ಸೀತಾರಾಮ್ ಯಚೂರಿ ಹಾಗೂ ಗುಲಾಂ ನಬಿ ಅಜಾದ್ ಅವರೊಂದಿಗೆ ಕೂಡ ಚರ್ಚಿಸಿದ್ದು, ಕೇರಳ ಚುನಾವಣೆಯಲ್ಲಿ ಎಲ್ಡಿಎಫ್ಗೆ ಬೆಂಬಲ ನೀಡಲಿದ್ದೇವೆ ಎಂದು ಪಿಸಿ ಚಾಕೊ ತಿಳಿಸಿದ್ದಾರೆ.
ಕೇರಳ ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ, ಕಾಂಗ್ರೆಸ್ ನ ಉನ್ನತ ನಾಯಕರು ಗುಂಪುಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಚಾಕೊ ಕಳೆದ ವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ್ದರು. ್
74 ವರ್ಷದ ಚಾಕೊ, ಕೇರಳ ಕಾಂಗ್ರೆಸ್ನ ಪ್ರಮುಖ ನಾಯಕರಾಗಿದ್ದು ಹಲವು ದಶಕಗಳ ಕಾಲ ಕೇರಳ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡು ದೊಡ್ಡ ನಾಯಕರಾಗಿ ಬೆಳೆದಿದ್ದರು. ಚಾಕೋ ಅವರು ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾಗಿದ್ದು, ಈ ಹಿಂದೆ ದೆಹಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯಕನಿರ್ವಹಿಸಿದ್ದರು.