ಚೆನ್ನೈ, ಮಾ. 16 (DaijiworldNews/MB) : ಹಿರಿಯ ನಟ ಹಾಗೂ ಮಕ್ಕಳ್ ನಿಧಿ ಮಯ್ಯಮ್(ಎಂಎನ್ಎಮ್) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಕಾರಿನ ಮೇಲೆ ದಾಳಿ ನಡೆಸಿದ ಪಾನಮತ್ತ ವ್ಯಕ್ತಿ ಕಮಲ್ ಹಾಸನ್ ಅವರನ್ನು ಭೇಟಿಯಾಗಲು ಬಯಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ತಡರಾತ್ರಿ ಕಮಲ್ ಹಾಸನ್ ಅವರು ಚುನಾವಣೆ ಪ್ರಚಾರ ಮುಗಿಸಿ ಕಾಂಚಿಪುರಂನಲ್ಲಿ ಹೋಟೆಲ್ ಕಡೆಗೆ ಹೋಗುತ್ತಿದ್ದ ಸಂದರ್ಭ ಯುವಕನೋರ್ವ ಕಮಲ್ ಹಾಸನ್ ಅವರ ಕಾರಿನ ಮೇಲೆ ದಾಳಿ ಮಾಡಿದ್ದು, ಕಾರಿನ ವಿಂಡ್ ಸ್ಕ್ರೀನ್ಗೆ ಹಾನಿಯಾಗಿದೆ. ಘಟನೆಯಲ್ಲಿ ಕಮಲ್ ಹಾಸನ್ ಅವರಿಗೆ ಯಾವುದೇ ಗಾಯವಾಗಿಲ್ಲ. ಮಕ್ಕಳ ನೀಧಿ ಮಯ್ಯುಂ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮದ್ಯದ ಅಮಲಿನಲ್ಲಿದ್ದ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಆತನನ್ನು ಪೊಲೀಸರ ವಶಕ್ಕೆ ನೀಡಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಈ ವ್ಯಕ್ತಿ ಕಮಲ್ ಹಾಸನ್ ಅವರ ಅಭಿಮಾನಿಯಾಗಿದ್ದು ಪಾನಮತ್ತನಾಗಿ ಕಮಲ್ ಹಾಸನ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದ ವೇಳೆ ಕಾರಿಗೆ ಹಾನಿಯಾಗಿದೆ ಎಂದು ಪೊಲೀಸರು ತನಿಖೆ ನಡೆಸಿ ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿದ್ದು, ಕಮಲ್ ಹಾಸನ್ ಅವರು ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.