ಮುಂಬೈ, ಮಾ. 16 (DaijiworldNews/MB) : ಕನ್ನಡಪರ ಸಂಘಟನೆಗಳು ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯವೆಸಗುತ್ತಿದ್ದು ಈ ಹಿನ್ನೆಲೆ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು ಎಂದು ಶಿವಸೇನಾ ಆಗ್ರಹಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ
ಶಿವಸೇನಾಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಬಗ್ಗೆ ಉಲ್ಲೇಖಿಸಿರುವ ಶಿವಸೇನಾ, ಬೆಳಗಾವಿಯಲ್ಲಿ ಕನ್ನಡಪರ ಸಂಘಟನೆ ಕಾರ್ಯಕರ್ತರು ದೌರ್ಜನ್ಯ ನಡೆಸುತ್ತಿದ್ದಾರೆ. ಅಂಗಡಿಗಳಿಗೆ ಅಳವಡಿಸಿದ್ದ ಮರಾಠಿ ಫಲಕಗಳನ್ನು ಕಿತ್ತೆಸೆದಿದ್ದಾರೆ ಎಂದು ಹೇಳಿದ್ದು ಮಾತ್ರವಲ್ಲದೇ, ಕರ್ನಾಟಕ ಪೊಲೀಸರು ಸಹ ಮರಾಠಿ ಭಾಷಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದೆ.
ಸ್ಥಳೀಯರು ಮಾತ್ರವಲ್ಲದೆ ಪೊಲೀಸರು ಕೂಡಾ ಮರಾಠಿ ಭಾಷಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಆಡಳಿತದಲ್ಲಿರುವ ಬಿಜೆಪಿ ಪಕ್ಷ ಇದಕ್ಕೆ ಬೆಂಬಲ ನೀಡುತ್ತಿದೆ ಎಂಬ ಸಂಶಯ ಉಂಟಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್ ಅವರು ಕರ್ನಾಟಕದ ಮುಖ್ಯಮಂತ್ರಿ, ಕೇಂದ್ರದ ಸಚಿವರೊಂದಿಗೆ ಚರ್ಚೆ ನಡೆಸಬೇಕು ಎಂದು ಮನವಿ ಮಾಡಿದೆ.
ಇನ್ನು ಮಹಾರಾಷ್ಟ್ರದಲ್ಲಿ ಹಲವು ಭಾಷೆಯ ಜನರು ಇದ್ದಾರೆ. ಆದರೆ ಎಂದಿಗೂ ಅವರಿಗೆ ತೊಂದರೆ ಉಂಟಾಗಿಲ್ಲ. ಅವರಿಗೆ ಸ್ಥಳೀಯರೊಂದಿಗೆ ಸಂಘರ್ಷವಾಗಿಲ್ಲ. ಪರಭಾಷಿಕರೊಂದಿಗೆ ಮರಾಠಿಗರು ಎಂದಿಗೂ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದೂ ಹೇಳಿದ್ದಾರೆ.