ಕೊಲ್ಕತ್ತಾ, ಮಾ. 16 (DaijiworldNews/MB) : ತೃಣಮೂಲ ಕಾಂಗ್ರೆಸ್ಸಿನಿಂದ ಪಕ್ಷಕ್ಕೆ ವಲಸೆ ಬಂದ ಹಲವರನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನಾಗಿಸಿರುವ ಪಕ್ಷದ ನಿಲುವನ್ನು ಖಂಡಿಸಿ ಕೊಲ್ಕತ್ತಾದಲ್ಲಿನ ಹೇಸ್ಟಿಂಗ್ಸ್ ಪ್ರದೇಶದಲ್ಲಿರುವ ಪಕ್ಷದ ಚುನಾವಣಾ ಕಚೇರಿಯ ಹೊರಗಡೆ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಕಚೇರಿಯ ಹೊರಗಡೆ ಬ್ಯಾರಿಕೇಡುಗಳನ್ನು ದಾಟಿ ಕಟ್ಟಡದೊಳಗೆ ಪ್ರವೇಶ ಮಾಡಲು ನೂರಾರು ಬಿಜೆಪಿ ಬೆಂಬಲಿಗರು ಯತ್ನಿಸಿರುವ ವಿಡಿಯೋ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇನ್ನು ಈ ವೇಳೆ ಹಿರಿಯ ಬಿಜೆಪಿ ನಾಯಕರುಗಳಾದ ಮುಕುಲ್ ರಾಯ್, ಅರ್ಜುನ್ ಸಿಂಗ್ ಹಾಗೂ ಶಿವ ಪ್ರಕಾಶ್ ಅವರನ್ನು ವಿರುದ್ದ ಪ್ರತಿಭಟನಾನಿರತ ಬಿಜೆಪಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆಯು ಗುವಾಹಟಿಯಿಂದ ದೆಹಲಿಗೆ ಕೇಂದ್ರ ಗೃಹ ಸಚಿವ ದಿಢೀರ್ ಆಗಿ ಕೊಲ್ಕತ್ತಾದಲ್ಲಿ ರಾತ್ರಿ ತಂಗಲು ನಿರ್ಧರಿಸಿದ ಹಾಗೂ ಮಂಗಳವಾರ ನಡೆಯಲಿರುವ ಪ್ರಚಾರಾಭಿಯಾನದಲ್ಲಿ ಪಾಲ್ಗೊಳ್ಳಲು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಆಗಮಿಸಿದ ದಿನದಂದೇ ನಡೆದಿದೆ.
ಇನ್ನು ಈ ಸಂದರ್ಭದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಬಳಿಕ ರಾಜ್ಯದ ಸಿಂಗೂರ್ನಲ್ಲಿರುವ ಪಕ್ಷ ಕಚೇರಿ ಹಾಗೂ ಚಿನ್ಸುರಾದಲ್ಲಿರುವ ಬಿಜೆಪಿ ಜಿಲ್ಲಾ ಮುಖ್ಯ ಕಾರ್ಯಾಲಯದ ಕಚೇರಿಗಳಲ್ಲಿ ದಾಂಧಲೆ ನಡೆದಿದೆ.
ಇಷ್ಟೇ ಅಲ್ಲದೆ ಪಕ್ಷ ಸಂಘಟನಾ ಕಾರ್ಯಕ್ಕೆ ಆಗಮಿಸಿದ್ದ ಮಧ್ಯ ಪ್ರದೇಶ ಆರೋಗ್ಯ ಸಚಿವರನ್ನು ಬಿಜೆಪಿ ಕಾರ್ಯಕರ್ತರು ಅಂಗಡಿಯೊಂದರೊಳಗೆ ಕೂಡಿಟ್ಟ ಘಟನೆಯೂ ನಡೆದಿದ್ದು ಹಲವಾರು ಗಂಟೆಗಳ ನಂತರ ಪೊಲೀಸರು ಅವರನ್ನು ರಕ್ಷಿಸಿದರು ಎಂದು ಕೂಡಾ ವರದಿಯಾಗಿದೆ.