ಗಾಂಧಿನಗರ,ಮಾ.16 (DaijiworldNews/HR): ಟಿ ಶರ್ಟ್ ಧರಿಸಿ ಸದನಕ್ಕೆ ಬಂದಿದ್ದ ಗುಜರಾತ್ ಕಾಂಗ್ರೆಸ್ ಶಾಸಕ ವಿಮಲ್ ಚುಡಾಸಮಾ ಅವರನ್ನು ಸ್ಪೀಕರ್ ರಾಜೇಂದ್ರ ತ್ರಿವೇದಿ ಅವರ ಆದೇಶದ ಮೇರೆಗೆ ವಿಧಾನಸಭೆಯಿಂದ ಹೊರಹಾಕಲಾಯಿತು ಎಂದು ತಿಳಿದು ಬಂದಿದೆ.
ಸದನದಲ್ಲಿ ಶಾಸಕರು ಸರಿಯಾದ ಬಟ್ಟೆ ಧರಿಸಬೇಕು ಮತ್ತು ಟಿ-ಶರ್ಟ್ ಧರಿಸುವುದನ್ನು ತಡೆಯಬೇಕೆಂದು ಸ್ಪೀಕರ್ ಒತ್ತಾಯಿಸಿದರೆ, ಪ್ರತಿಪಕ್ಷ ಕಾಂಗ್ರೆಸ್ ಸ್ಪೀಕರ್ ತ್ರಿವೇದಿ ನಿರ್ಧಾರವನ್ನು ವಿರೋಧಿಸಿತು, ಸದನದ ವಿಚಾರಣೆಗೆ ಹಾಜರಾಗುವಾಗ ಸದಸ್ಯರು ನಿರ್ದಿಷ್ಟ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸುವ ಯಾವುದೇ ನಿಯಮವಿಲ್ಲ ಎಂದು ಆರೋಪಿಸಿದ್ದಾರೆ.
ಚುಡಾಸಮಾ ಅವರಿಗೆ ಒಂದು ವಾರದ ಹಿಂದೆ ಸ್ಪೀಕರ್ ತ್ರಿವೇದಿ ಅವರು ಮೊದಲ ಬಾರಿಗೆ ಟಿ ಶರ್ಟ್ ಧರಿಸಿ ಸದನಕ್ಕೆ ಬರಬಾರದೆಂದು ಮನವಿ ಮಾಡಿದ್ದರು ಮತ್ತು ಮುಂದಿನ ಬಾರಿ ಕಾಳಜಿ ವಹಿಸುವಂತೆ ಸಲಹೆ ನೀಡಿದ್ದರು ಎನ್ನಲಾಗಿದೆ.
ಆದರೆ ಚುಡಾಸಮಾ ಸೋಮವಾರ ಮತ್ತೆ ಟಿ-ಶರ್ಟ್ ಧರಿಸಿ ಸದನಕ್ಕೆ ಬಂದಾಗ, ತ್ರಿವೇದಿ ತಮ್ಮ ಹಿಂದಿನ ಸೂಚನೆಯನ್ನು ನೆನಪಿಸಿದರು ಮತ್ತು ಶರ್ಟ್, ಕುರ್ತಾ ಅಥವಾ ಬ್ಲೇಝರ್ ಧರಿಸಿ ಹಿಂತಿರುಗಿ ಬರಲು ಹೇಳಿದರು ಎನ್ನಲಾಗಿದೆ.