ಬೆಂಗಳೂರು, ಮಾ. 16 (DaijiworldNews/MB) : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರದ ಆರೋಪವನ್ನು ಆಗಾಗ ಮಾಡುತ್ತಲಿರುವ ಬಿಜೆಪಿ ಶಾಸಕರೇ ಆದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಬಿಜೆಪಿ ಶಾಸಕ ರೇಣುಕಾಚಾರ್ಯ ಕಿಡಿಕರಾರಿದ್ದು, ''ಮಾತೆತ್ತಿದ್ರೆ ವಾಜಪೇಯಿ ಹೆಸರೆತ್ತಿ ಕಪಟ ನಾಟಕ ಮಾಡ್ತಿದ್ದೀರಾ'' ಎಂದು ಗುಡುಗಿದರು.
ವಿಧಾನಸೌಧದಲ್ಲಿ ಯತ್ನಾಳ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಶಾಸಕ ರೇಣುಕಾಚಾರ್ಯ ಅವರು, ''ಪದೇ ಪದೇ ಬಸನಗೌಡ ಪಾಟೀಲ್ ಯತ್ನಾಳ್ ಮುಖ್ಯಮಂತ್ರಿ ವಿರುದ್ದ ಇಲ್ಲಸಲ್ಲದ ಆರೋಪ ಮಾಡುತ್ತಲಿದ್ದಾರೆ. ಆದರೆ ಇನ್ನು ಅದನ್ನು ಸಹಿಸಲು ಆಗುವುದಿಲ್ಲ. ಶಾಸಕಾಂಗ ಸಭೆ ಕರೆದು ಯತ್ನಾಳ್ರನ್ನು ಉಚ್ಚಾಟನೆ ಮಾಡುವಂತೆ ನಾನು ಆಗ್ರಹಿಸುತ್ತೇನೆ'' ಎಂದರು.
''ನಿಮಗೆ ಮಾಧ್ಯಮದ ಮುಂದೆಯೇ ತಮ್ಮ ಪಕ್ಷದವರ ಮೇಲೆಯೇ ಆರೋಪ ಮಾಡುವುದನ್ನೇ ಪಕ್ಷ ಹೇಳಿಕೊಟ್ಟಿದಾ?'' ಎಂದು ಪ್ರಶ್ನಿಸಿದ ಅವರು, ''ಯಡಿಯೂರಪ್ಪ ಕುಟುಂಬದವರನ್ನು ಟಾರ್ಗೆಟ್ ಮಾಡಿಕೊಂಡೇ ಯತ್ನಾಳ್ ಅವರು ಮಾತಾನಾಡುತ್ತೀರಿ. ಅಷ್ಟಕ್ಕೂ ನಿಮ್ಮ ಬಳಿ ಇರುವ ದಾಖಲೆಯಾದರೂ ಏನು? ತಾಕತ್ತಿದ್ರೆ ಶಾಸಕಾಂಗ ಸಭೆಯಲ್ಲಿ ಮಾತನಾಡಲಿ. ನಾಟಕ ಬಿಟ್ಟು ನಿಮಗೆ ಧಮ್ ಇದ್ದರೆ ದಾಖಲೆ ಬಿಡುಗಡೆ ಮಾಡಿ'' ಎಂದು ಸವಾಲೆಸೆದರು.
''ಯತ್ನಾಳ್ನ ಈ ಮಾತುಗಳಿಂದ ಬಿಜೆಪಿ ಸಾಮಾನ್ಯ ಕಾರ್ಯಕರ್ತರಿಗೆ ನೋವಾಗುತ್ತಿದೆ. ಇನ್ನು ಯತ್ನಾಳ್ ಹಾದಿ ಬೀದಿಲಿ ಮಾತನಾಡಿದರೆ ಸಹಿಸಲಾಗಲ್ಲ. ಯಡಿಯೂರಪ್ಪ ಬಗ್ಗೆ ಟೀಕೆ ಮಾಡಿದ್ರೂ ಒಂದೇ, ಪಕ್ಷದ ಉಪಾಧ್ಯಕ್ಷ ವಿಜಯೇಂದ್ರಗೆ ಟೀಕೆ ಮಾಡಿದ್ರೂ ಒಂದೇ. ಯತ್ನಾಳ್ ಪಕ್ಷದ ಚೌಕಟ್ಟಲ್ಲಿ ಇರುವುದನ್ನು ಕಲಿಯಬೇಕು'' ಎಂದು ಕೆಂಡಮಂಡಲರಾದರು.
''ಯಡಿಯೂರಪ್ಪ ಪಕ್ಷ ಕಟ್ಟಿ ಬೆಳೆಸಿದವರು. ಅವರ ಮೇಲೆಯೇ ಇಲ್ಲಸಲ್ಲದ ಆರೋಪ ಮಾಡುತ್ತಾರೆ. ವರ್ಗಾವಣೆ ಸ್ಥಗಿತ ಮಾಡುವಂತೆ ನಾವೇ ಹೇಳಿದ್ದು. ಯಡಿಯೂರಪ್ಪ ಆ ವರ್ಗಾವಣೆ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿಲ್ಲ, ವಿಜಯೇಂದ್ರರೂ ಭ್ರಷ್ಟಾಚಾರ ಮಾಡಿಲ್ಲ'' ಎಂದೂ ಹೇಳಿದರು.
''ನನಗೆ ಹೊನ್ನಾಳಿ ಸಮಾಜದ ಜನ ಓಟು ಕೊಟ್ಟಿದ್ದಾರೆ. ಪಂಚಮಸಾಲಿ ಸಮಾಜ ಸೇರಿ ಎಲ್ಲ ಪಂಗಡದವರೂ ನನಗೆ ಓಟು ಹಾಕಿದಾರೆ. ನಾನೂ ಬಿಜಾಪುರ ಬರುತ್ತೇನೆ, ನೀನು ಹೊನ್ನಾಳಿ ಬಂದು ತಾಕತ್ತಿದ್ರೆ ಪ್ರಚಾರ ಮಾಡು'' ಎಂದು ಸವಾಲೆಸೆದರು.