ನವದೆಹಲಿ, ಮಾ16 (DaijiworldNews/MS): ಕೇಂದ್ರ ಸರ್ಕಾರದ ಖಾಸಗೀಕರಣದ ಧೋರಣೆ ವಿರುದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಸಗೀಕರಣವು ಸಾರ್ವಜನಿಕರಿಗೆ ನೋವುಂಟು ಮಾಡುತ್ತದೆ ಮತ್ತು ಕೇಂದ್ರದ ಬೆರಳೆಣಿಕೆಯಷ್ಟುಆಪ್ತರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಭಾರತ ಸರ್ಕಾರ (ಜಿಒಐ) ಲಾಭವನ್ನು ಖಾಸಗೀಕರಣಗೊಳಿಸಿ ನಷ್ಟವನ್ನು ರಾಷ್ಟ್ರೀಕರಣಗೊಳಿಸುತ್ತಿದೆ. ಸಾರ್ವಜನಿಕ ವಲಯ ಬ್ಯಾಂಕುಗಳನ್ನು ತಮ್ಮ ಆಪ್ತರಿಗೆ ಮಾರಾಟ ಮಾಡುವ ಮೂಲಕ ಭಾರತದ ಆರ್ಥಿಕ ಭದ್ರತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ
ಸಾರ್ವಜನಿಕ ವಲಯ ಬ್ಯಾಂಕುಗಳನ್ನು ತಮ್ಮ ಆಪ್ತರಿಗೆ ಮಾರಾಟ ಮಾಡುವ ಮೂಲಕ ಸರ್ಕಾರ ದೇಶದ ಹಣಕಾಸು ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಬ್ಯಾಂಕು ನೌಕರರ ಮುಷ್ಕರಕ್ಕೆ ನನ್ನ ಬೆಂಬಲವಿದೆ ಎಂದು ಟ್ವೀಟಿಸಿದ್ದಾರೆ.
ಸರ್ಕಾರದ ಖಾಸಗೀಕರಣ ಯೋಜನೆಗಳನ್ನು ವಿರೋಧಿಸಿ,ಎಐಬಿಇಎ, ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಎಫ್ಐ, ಇನ್ಬೆಫ್, ಐಎನ್ಬಿಒಸಿ, ಎನ್ಒಬಿಡಬ್ಲ್ಯೂ, ನೊಬೊಗಳನ್ನು ಒಳಗೊಂಡ ಯುನೈಟೆಡ್ ಫೋರಂ ಆಫ್ ಯೂನಿಯನ್ಗಳ ಬ್ಯಾನರ್ ಅಡಿ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಸರ್ಕಾರದ ಪ್ರಸ್ತಾಪದ ವಿರುದ್ಧ ಕಳೆದೆರಡು ದಿನಗಳಿಂದ ಆಂದೋಲನ ನಡೆಸುತ್ತಿದ್ದಾರೆ.