ಬೆಂಗಳೂರು, ಮಾ.16 (DaijiworldNews/MB) : ಫುಡ್ ಡೆಲಿವರಿಗೆ ಹೋಗಿದ್ದ ಸಂದರ್ಭ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಝೊಮ್ಯಾಟೋ ಡೆಲವರಿ ಬಾಯ್ ಈಗ ಯುವತಿಯ ಮೇಲೆಯೇ ದೂರು ದಾಖಲಿಸಿದ್ದಾರೆ. ಯುವತಿ ದೂರು ದಾಖಲು ಮಾಡಿದ್ದ ಪೊಲೀಸ್ ಠಾಣೆಯಲ್ಲಿಯೇ ಯುವಕ ದೂರು ದಾಖಲಿಸಿದ್ದಾನೆ.
ಫುಡ್ ಡೆಲಿವರಿಗೆ ಹೋಗಿದ್ದ ಸಂದರ್ಭ ನನ್ನ ಮೇಲೆ ಝೊಮ್ಯಾಟೋ ಬಾಯ್ ಹಲ್ಲೆ ನಡೆಸಿದ್ದಾನೆ ಎಂದು ಯುವತಿ ಹಿತೇಶಾ ಇಂದ್ರಾಣಿ ಆರೋಪಿಸಿದ್ದು ಮೂಗಿನಲ್ಲಿ ರಕ್ತಸ್ರಾವವಾಗುತ್ತಿರುವ ವೀಡಿಯೊಗಳನ್ನು ಹಂಚಿಕೊಂಡಿದ್ದರು. ಈ ಬೆನ್ನಲ್ಲೇ ಡೆಲಿವರಿ ಬಾಯ್ ಅನ್ನು ಪೊಲೀಸರು ಬಂಧಿಸಿದ್ದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಹಾಗೆಯೇ ಪೊಲೀಸ್ ಕೇಸು ಇರುವ ಕಾರಣದಿಂದಾಗಿ ತಾತ್ಕಾಲಿಕವಾಗಿ ಝೊಮ್ಯಾಟೋದಿಂದ ಅಮಾನತುಗೊಂಡಿದ್ದಾನೆ.
ಯುವತಿ ಹಿತೇಶಾ ಇಂದ್ರಾಣಿ ತಾನು ಝೊಮ್ಯಾಟೋ ಮೂಲಕ ಆರ್ಡರ್ ಮಾಡಿದ್ದ ಆಹಾರ ಬರುವುದು ವಿಳಂಬವಾಗಿದೆ ಎಂದು ವೀಡಿಯೊದಲ್ಲಿ ತಿಳಿಸಿದ್ದರು. ಈ ಬಗ್ಗೆ ಗ್ರಾಹಕರ ಸಹಾಯವಾಣಿಯೊಂದಿಗೆ ಮಾತನಾಡುತ್ತಿದ್ದ ಸಂದರ್ಭ ಡೆಲವರಿ ಬಾಯ್ ಬಂದು ಹೊಡೆದು ಹೊರಟುಹೋಗಿದ್ದಾನೆ. ಇದರಿಂದಾಗಿ ಮೂಗಿನಿಂದ ರಕ್ತಸ್ತ್ರಾವವಾಗುತ್ತಿದೆ ಎಂದು ಯುವತಿ ದೂರಿದ್ದಳು.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಝೊಮ್ಯಾಟೋ ಬಾಯ್ ಕಾಮರಾಜ್, "ಯುವತಿಯೇ ನನ್ನ ಮೇಲೆ ಹಲ್ಲೆ ಮಾಡಿದ್ದಾಗಿ ಹೇಳಿದ್ದಾನೆ. ಅಂದು ಫುಡ್ ಡೆಲಿವರಿ ಮಾಡುವುದು ತಡವಾಯಿತು. ತಡವಾದ ಕಾರಣ ಯುವತಿ ನನ್ನೊಂದಿಗೆ ಜಗಳವಾಡಿದ್ದಾಳೆ. ಟ್ರಾಫಿಕ್ ಸಮಸ್ಯೆಯ ಕಾರಣದಿಂದ ತಡವಾಗಿದೆ ಎಂದು ನಾನು ತಿಳಿಸಿದ್ದೆ. ಪಾರ್ಸ್ಲ್ಗೆ ಹಣ ಪಾವತಿ ಮಾಡುವಂತೆ ಕೇಳಿದೆ. ಆದರೆ, ಯುವತಿ ಹಣ ಪಾವತಿ ಮಾಡುವುದಿಲ್ಲ ಎಂದು ಹೇಳಿದ್ದು, ಜೊಮ್ಯಾಟೋ ಕಸ್ಟಮರ್ ಸಪೋರ್ಟರ್ ಬಳಿ ಮಾತನಾಡಿದ್ದಾಳೆ. ಆತ ಫುಡ್ ಹಿಂದಿರುಗಿಸುವಂತೆ ಹೇಳಿದ್ದು, ಹಾಗಾಗಿ ನಾನು ಯುವತಿಯ ಜೊತೆ ಫುಡ್ ಹಿಂದಿರುಗಿಸಲು ಕೇಳಿದೆ. ಆದರೆ ಯುವತಿ ಹಣವನ್ನೂ ನೀಡದೇ, ಫುಡ್ ಅನ್ನು ಹಿಂದಿರುಗಿಸದೇ ಜಗಳವಾಡಿದ್ದಾಳೆ" ಎಂದು ಹೇಳಿದ್ದಾನೆ.
"ಅನಿವಾರ್ಯವಾಗಿ ಫುಡ್ ಪಾರ್ಸಲ್ ಅಲ್ಲೇ ಬಿಟ್ಟು ಹಿಂದಿರುಗಲು ಹೋದೆ. ಆದರೆ, ಆ ವೇಳೆ ಯುವತಿ ನನ್ನ ಮೇಲೆ ಚಪ್ಪಲಿ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ. ಅಲ್ಲದೇ, ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಈ ವೇಳೆ ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಯುವತಿಯ ಕೈಯಲ್ಲಿದ್ದ ಉಂಗುರವೇ ಆಕೆಯ ಮೂಗಿಗೆ ತಾಗಿ ರಕ್ತ ಬರಲಾರಂಭಿಸಿದೆ. ಇದರಿಂದ ಭಯಗೊಂಡು ನಾನು ಸ್ಥಳದಿಂದ ತಪ್ಪಿಸಿಕೊಂಡು ಬಂದೆ" ಎಂದು ತಿಳಿಸಿದ್ದಾನೆ.
ಯುವತಿ ಹಾಗೂ ಡೆಲವರಿ ಬಾಯ್ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿದ್ದಾರೆ. ಈ ಹಿನ್ನೆಲೆ ಎರಡು ಆಯಾಮಗಳ ತನಿಖೆ ನಡೆಯುತ್ತಿದೆ.
ಡೆಲವರಿ ಬಾಯ್ ದೂರಿನಂತೆ ಯುವತಿಯ ವಿರುದ್ದ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಾಗಿದೆ.
ಝೊಮ್ಯಾಟೋ ಈ ಎರಡು ಆಯಾಮಗಳ ದೂರಿಗೂ ಬೆಂಬಲ ನೀಡುವುದಾಗಿ ತನಿಖೆ ನಡೆಯಲಿ, ಬಳಿಕ ನೈಜ್ಯ ವಿಷಯ ಬೆಳಕಿಗೆ ಬರಲಿದೆ ಎಂದು ಹೇಳಿದೆ.