ನವದೆಹಲಿ, ಮಾ.16 (DaijiworldNews/MB) : ಭಾರತದಲ್ಲಿ ಮತ್ತೆ ಕೊರೊನಾ ಸೋಂಕು ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 17ಕ್ಕೆ ಮಧ್ಯಾಹ್ನ 12.30ಕ್ಕೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ವಿಡಿಯೋ ಕಾನ್ಫೆರೆನ್ಸ್ ಮೂಲಕ ಸಭೆ ಕರೆದಿದ್ದಾರೆ.
ಜನವರಿಯಲ್ಲಿ ಪ್ರಧಾನಿ ಮುಖ್ಯಮಂತ್ರಗಳ ಜೊತೆ ಸಭೆ ನಡೆಸಿ ಕೊರೊನಾ ಲಸಿಕೆ ಕುರಿತು ಮಾತನಾಡಿದ್ದರು. ಈಗ ಪ್ರಧಾನಿಯವರು ಮತ್ತೆ ಸಭೆ ಕರೆದಿದ್ದು ಕೊರೊನಾ ಸೋಂಕು ನಿಯಂತ್ರಣದ ಕುರಿತಾಗಿ ರಾಜ್ಯವಾರು ಮಾಹಿತಿ ಪಡೆದು ಸಲಹೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ. ಈ ನಡುವೆ ಮತ್ತೆ ಲಾಕ್ಡೌನ್ನ ಆತಂಕವೂ ಕೂಡಾ ಮನೆ ಮಾಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ ಮಹಾರಾಷ್ಟ್ರ ಮತ್ತು ತಮಿಳುನಾಡು ಸೇರಿದಂತೆ ಎಂಟು ರಾಜ್ಯಗಳಲ್ಲಿ ಹೊಸ ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ.
ಸೋಮವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು, ಕೊರೊನಾ ಬಗ್ಗೆಗಿನ ನಿರ್ಲಕ್ಷ್ಯವು ದೇಶದ ವಿವಿಧ ಭಾಗಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದ್ದಾರೆ.
ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಸಭೆ ಕರೆದಿದ್ದಾರೆ.