ಬೆಂಗಳೂರು, ಮಾ16 (DaijiworldNews/MS): ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಸೋಂಕಿನ ಬಗ್ಗೆ ತಜ್ಞರ ಸಮಿತಿ ಇದು ಎರಡನೇ ಅಲೆ ಮುನ್ಸೂಚನೆ ಎಂದು ತಿಳಿಸಿದ್ದು, ಪರಿಸ್ಥಿತಿ ಎದುರಿಸಲು ಕೆಲ ಸಲಹೆ ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದು ಒಂದು ವಾರ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ಸೋಮವಾರ ಕೋವಿಡ್ ತಾಂತ್ರಿಕ ಸಲಹಾ, ತಜ್ಞರ ಸಮಿತಿ ಸಭೆ ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ , ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಆಗಬಾರದು ಎಂದರೆ ಜನತೆ ಕಟ್ಟುನಿಟ್ಟಾಗಿ ಕೊರೋನಾ ನಿಯಮ ಪಾಲನೆ ಮಾಡಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ ಅನಿವಾರ್ಯವೆಂದು ಎಂದು ತಿಳಿಸಿದ್ದಾರೆ.
ಕೊರೋನಾ ಪರಿಸ್ಥಿತಿ ಅವಲೋಕನ ಕುರಿತು ತಜ್ಞರ ಜೊತೆ ಸಮಾಲೋಚನೆ ಮಾಡಲಾಯಿತು. ಎಲ್ಲರ ಅಭಿಪ್ರಾಯದಂತೆ ಕಳೆದ 14 ದಿನಗಳಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ, ಮರಣ ದರ ಕಡಿಮೆ ಇದೆ. ಬೀದರ್, ಕಲಬುರಗಿ ಬೆಂಗಳೂರು ಗ್ರಾಮಾಂತರ, ತುಮಕೂರು ಉಡುಪಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಇದು ಕೊರೋನಾ ಎರಡನೇ ಅಲೆಯ ಮುನ್ಸೂಚನೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೆಚ್ಚು ಪಾಸಿಟಿವ್ ಇರುವ ಜಿಲ್ಲೆಯಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದರು.
ಅಲ್ಲದೆ ಮಹಾರಾಷ್ಟ್ರ, ಕೇರಳದಿಂದ ಬರುವವರ ಮೇಲೆ ನಿಗಾ ಇರಿಸಲು ಸಲಹೆ ಬಂದಿದೆ. ಇನ್ನು ರಾಜ್ಯದಲ್ಲಿ ಶೇ.80 ರಷ್ಟು ಜನ ಮಾಸ್ಕ್ ಧರಿಸುತ್ತಿಲ್ಲ . ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಮದುವೆ ಮುಂತಾದ ಕಾರ್ಯಕ್ರಮದಲ್ಲಿ 500 ಜನಸಂಖ್ಯೆ ಮೀರಬಾರದು, ಕೊರೊನಾ ಪರೀಕ್ಷೆ ಹೆಚ್ಚಿಸಬೇಕು, ರೋಗಲಕ್ಷಣ ಇರುವವರಿಗೆ ಪರೀಕ್ಷೆ ಹೆಚ್ಚಿಸಬೇಕು ಎಂಬಿತ್ಯಾದಿ ಸಲಹೆ ನೀಡಿದ್ದಾರೆ ಎಂದರು.