ಬೆಂಗಳೂರು, ಮಾ. 15 (DaijiworldNews/HR) : "ಮುಖ್ಯಮಂತ್ರಿಯವರ ಕುಟುಂಬದ ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯದ ವಿರುದ್ಧ ನನ್ನ ಹೋರಾಟ ನಿರಂತರವಾಗಿ ಮುಂದುವರಿಯಲಿದೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಖ್ಯಮಂತ್ರಿ ಮಾತ್ರವಲ್ಲ, ಅವರ ಇಡೀ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಎಲ್ಲ ವರ್ಗಾವಣೆ ಸಿಎಂ ಮನೆಯಿಂದಲೇ ಆಗುವುದು. ಅಷ್ಟೆ ಅಲ್ಲದೇ 'ಡಿ' ಗ್ರೇಡ್ ವರ್ಗಾವಣೆ ಸಮೇತ ಮುಖ್ಯಮಂತ್ರಿ ಕುಟುಂಬದಿಂದಲೇ ಆಗಬೇಕು. ಅಷ್ಟು ಭ್ರಷ್ಟಾಚಾರದಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ತೊಡಗಿದೆ" ಎಂದು ಆರೋಪಿಸಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ತಕುರಿತು ಪ್ರತಿಕ್ರಿಯಿಸಿ ಅವರು, "ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ನೀಡಿರುವುದರಿಂದ ನ್ಯಾಯ ಸಿಗಲ್ಲ. ಮುಖ್ಯಮಂತ್ರಿ ಮತ್ತು ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಹಿಡಿತದಲ್ಲಿ ಎಸ್ಐಟಿ ಇದೆ ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.