ನವದೆಹಲಿ, ಮಾ 15(DaijiworldNews/MS):ಚುನಾವಣಾ ಫಲಿತಾಂಶದ ವೇಳೆಒಂದು ವೇಳೆ ‘ನೋಟಾ’ವು (ನನ್ ಆಫ್ ದಿ ಅಬವ್- ಮೇಲಿನ ಯಾರೊಬ್ಬರೂ ಬೇಡ) ಬೇರಾವುದೇ ಅಭ್ಯರ್ಥಿಗಳಿಗಿಂತ ಗರಿಷ್ಠ ಮತಗಳನ್ನು ಪಡೆದರೆ ಅಂತಹ ಚುನಾವಣಾ ಕ್ಷೇತ್ರದ ಫಲಿತಾಂಶವನ್ನು ರದ್ದುಗೊಳಿಸಿ ಮತ್ತೊಮ್ಮೆ ಹೊಸತಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿರುವ ಅರ್ಜಿಯೊಂದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಕುರಿತು ಕೇಂದ್ರ ಸರ್ಕಾರ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ ನೋಟೀಸ್ ನೀಡಿದೆ.
ಬಿಜೆಪಿಯ ಮುಖಂಡ ಹಾಗೂ ವಕೀಲ ಆಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯಲ್ಲಿ, ನೋಟಾದಿಂದಾಗಿ ರದ್ದುಗೊಂಡ ಚುನಾವಣೆಯಲ್ಲಿ ಮತ್ತೊಮ್ಮೆ ಅದೇ ಅಭ್ಯರ್ಥಿಗಳು ಹೊಸತಾಗಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.
ಪ್ರಕರಣದ ವಿಚಾರಣೆಯನ್ನು ಕೈಗೊಂಡ ಸಿಜೆಐ ಎಸ್ ಎ ಬೊಬ್ಡೆ ನೇತೃತ್ವದ ಎ ಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠವು ಅರ್ಜಿಯ ಸಂಬಂಧ ಪ್ರತಿಕ್ರಿಯೆಯನ್ನು ಕೋರಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ ಅವರು ವಾದಿಸುತ್ತಿದ್ದಾರೆ.
ವಕೀಲ ಅಶ್ವನಿ ಅವರ ಅರ್ಜಿಯಲ್ಲಿ ರಾಜಕೀಯ ಪಕ್ಷಗಳು ಕ್ಷೇತ್ರದ ಮತದಾರರನ್ನು ಸಂಪರ್ಕಿಸದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ಇದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ.