ನವದೆಹಲಿ, ಮಾ 15(DaijiworldNews/MS): 2.5 ಲಕ್ಷ ಕೋಟಿ ಆಸ್ತಿ ಹಣ ಗಳಿಸುವ ಭಾಗವಾಗಿ ದೇಶದ ಪ್ರಮುಖ ನಾಲ್ಕು ವಿಮಾನ ನಿಲ್ದಾಣಗಳಾದ ಬೆಂಗಳೂರು, ದೆಹಲಿ, ಮುಂಬೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಉಳಿದಿರುವ ತನ್ನ ಸಂಪೂರ್ಣ ಪಾಲನ್ನು ಮಾರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯೋಜಿಸಿದೆ ಎಂಬ ವರದಿಗಳ ಮೇಲೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇಂದು ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಇಂತಹ ಖಾಸಗೀಕರಣವು ಸಾರ್ವಜನಿಕರಿಗೆ ನೋವುಂಟು ಮಾಡುತ್ತದೆ ಮತ್ತು ಬೆರಳೆಣಿಕೆಯಷ್ಟು ಗೆಳೆಯರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ ಎಂದು ಆರೋಪಿಸಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳನ್ನು ಈಗಾಗಲೇ ಖಾಸಗಿ ಕಂಪನಿಗಳು ನಿರ್ವಹಿಸುತ್ತಿದ್ದು ತಮ್ಮ ಪೂರ್ಣ ಪ್ರಮಾಣದ ಷೇರನ್ನು ಕಂಪೆನಿಗಳಿಗೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಹೆಚ್ಚುವರಿ ಹಣಕಾಸು ಕ್ರೋಢೀಕರಿಸುವ ಉದ್ದೇಶದ ಸರಕಾರದ ಮಹತ್ವಾಕಾಂಕ್ಷೆಯ ರೂ 2.5 ಲಕ್ಷ ಕೋಟಿ ಆಸ್ತಿ ನಗದೀಕರಣ ಯೋಜನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಈ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ, "ಹೇಗೆ ನಿರ್ಮಿಸುವುದು ಎಂದು ತಿಳಿದಿಲ್ಲ, ಮಾರಾಟ ಮಾಡುವುದು ಹೇಗೆ ಎಂದು ತಿಳಿದಿದೆ" ಎಂದು ಟ್ವೀಟ್ ಮಾಡಿದ್ದಾರೆ."#IndiaAgainstPrivatisation ಇದು ಸಾರ್ವಜನಿಕರನ್ನು ನೋಯಿಸುತ್ತದೆ ಮತ್ತು ಬೆರಳೆಣಿಕೆಯಷ್ಟು ಗೆಳೆಯರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ" ಎಂದು ಕಾಂಗ್ರೆಸ್ ಮಾಜಿ ಮುಖ್ಯಸ್ಥರಾದ ರಾಹುಲ್ ಹೇಳಿದ್ದಾರೆ.