ನವದೆಹಲಿ, ಮಾ. 15 (DaijiworldNews/HR) : ಉಡುಪಿ ಮೂಲದ ವಿದ್ಯಾರ್ಥಿನಿ ರಶ್ಮಿ ಸಮಂತ್ ಅವರು ಬ್ರಿಟನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ರಾಜೀನಾಮೆ ನೀಡಲು ಕಾರಣವಾದ ಬೆಳವಣಿಗೆಗಳನ್ನು ಭಾರತ ಸರ್ಕಾರವು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯಬಿದ್ದಾಗ ಭಾರತವು ಅಲ್ಲಿನ ಸರ್ಕಾರದೊಂದಿಗೆ ಚರ್ಚೆ ನಡೆಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ರಶ್ಮಿ ಸಮಂತ್ ಅವರ ವಿರುದ್ಧ ಬ್ರಿಟನ್ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಅಪಪ್ರಚಾರ ಮತ್ತು ಆ ಬಳಿಕ ನಡೆದ ಬೆಳವಣಿಗೆಗಳ ಕುರಿತು ಬಿಜೆಪಿ ನಾಯಕಿ ಅಶ್ವಿನಿ ವೈಷ್ಣವ್ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು.
ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ರಶ್ಮಿ ಅವರ ಕೆಲ ಹಳೆಯ ಹೇಳಿಕೆಗಳು ಜನಾಂಗೀಯ ನಿಂದನೆ ಹಾಗೂ ಸಂವೇದನಾ ರಹಿತವಾಗಿದ್ದವು ಎಂದು ಹಲವರು ಆರೋಪಿಸಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು ಎನ್ನಲಾಗಿದೆ.
ಈ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಜೈಶಂಕರ್, "ಸದನದ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಭಾರತವು ಜನಾಂಗೀಯವಾದ ಎಲ್ಲಿಯೇ ಇದ್ದರೂ, ಜನಾಂಗೀಯ ನಿಂದನೆ ಯಾವುದೇ ಸ್ವರೂಪದಲ್ಲಿ ನಡೆದರೂ ಪ್ರತಿಕ್ರಿಯಿಸದೇ ಇರಲು ಆಗುವುದಿಲ್ಲ. ಬ್ರಿಟನ್ ನಮಗೆ ಮಿತ್ರರಾಷ್ಟ್ರ. ಆ ದೇಶದೊಂದಿಗೆ ಯಾವುದೇ ವಿಷಯದಲ್ಲಿ ವ್ಯವಹರಿಸುವಾಗ ಅತ್ಯಂತ ಎಚ್ಚರಿಕೆಯಿಂದ ಮುಂದಿನ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಅಗತ್ಯಬಿದ್ದಾಗ ಇಂಥ ವಿಷಯಗಳ ಬಗ್ಗೆ ಆ ದೇಶದ ಉನ್ನತ ವಲಯದಲ್ಲಿ ಚರ್ಚೆ ನಡೆಸುತ್ತೇವೆ. ಇಂಥ ಬೆಳವಣಿಗೆಗಳನ್ನು ಅತಿಸೂಕ್ಷ್ಮವಾಗಿ ಗಮನಿಸುತ್ತಿರುತ್ತೇವೆ" ಎಂದರು.
ಉಡುಪಿ ಮೂಲದ ರಶ್ಮಿ ಸಮಂತ(22) ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮೊದಲ ಭಾರತೀಯ ಮೂಲದ ಮಹಿಳಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಅವರ ಹಿಂದಿನ ಹೇಳಿಕೆಗಳಲ್ಲಿರುವ ಜನಾಂಗೀಯ ನಿಂದನೆಯ ಸ್ವರೂಪದ ಬಗ್ಗೆ ಹಲವರು ಪ್ರಸ್ತಾಪಿಸಿದ್ದರು. "ನನ್ನ ಹಿಂದಿನ ಹೇಳಿಕೆಗಳು ಮತ್ತು ವರ್ತನೆಗಳಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ" ಎಂದು ರಶ್ಮಿ ಹೇಳಿಕೆ ಕೂಡ ನೀಡಿದ್ದರು. ಆದರೆ ದೊಡ್ಡಸಂಖ್ಯೆಯ ವಿದ್ಯಾರ್ಥಿಗಳು ಅವರ ಮೇಲಿನ ವಿಶ್ವಾಸ ಕಳೆದುಕೊಂಡ ಕಾರಣ, ಅನಿವಾರ್ಯವಾಗಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ.
ಇನ್ನು ರಶ್ಮಿ ಅವರು 2017ರಲ್ಲಿ ಮಾಡಿದ್ದ ಒಂದು ಪೋಸ್ಟ್ ಈ ಎಲ್ಲ ವಿವಾದಗಳಿಗೆ ಕಾರಣವಾಗಿದ್ದು, ಜರ್ಮನಿಯ ಬರ್ಲಿನ್ನಲ್ಲಿಯ ‘ಬರ್ಲಿನ್ ಹೊಲೋಕಾಸ್ಟ್ ಮೆಮೊರಿಯಲ್’ ಎದುರು ತೆಗೆದುಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಅವರು, HOLLOWCASTS ಪದವನ್ನು HOLLOW ಮತ್ತು CASTS ಪದಗಳನ್ನು ಪ್ರತ್ಯೇಕವಾಗಿ ಬರೆದುಕೊಂಡಿದ್ದು, ಅದನ್ನು ಸಂವೇದನಾ ರಹಿತ ಪೋಸ್ಟ್ ಎಂದು ದೂರಲಾಗಿದ್ದು, ಇನ್ನೊಂದು ಪೋಸ್ಟ್ನಲ್ಲಿ ಮಲೇಷ್ಯಾದ ಬೌದ್ಧ ದೇಗುಲದ ಮುಂದಿನ ಅವರ ಚಿತ್ರಕ್ಕೆ Ching Chang ಎಂದು ಬರೆದುಕೊಂಡಿದ್ದು, ಆ ಪೋಸ್ಟ್ ಕುರಿತು ಚೀನಾ ಮೂಲದ ವಿದ್ಯಾರ್ಥಿಗಳಿಗೆ ಅವಹೇಳನಕಾರಿಯಾಗಿದೆ ಎಂದು ಆರೋಪ ಕೇಳಿಬಂದಿತ್ತು.