ಬೆಂಗಳೂರು, ಮಾ.15 (DaijiworldNews/MB) : ಮತ್ತೆ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ''ನಿಮ್ಮ ಕುರ್ಚಿಲಿ ನಾನು ಕೂರೋ ದಿನ ದೂರವೇನಿಲ್ಲ'' ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಸಂದರ್ಭ ಮಾತನಾಡಿದ ಅವರು, ''ರಾಜ್ಯದ ಇತಿಹಾಸದಲ್ಲೇ ನಾನು ಇಂತಹ ಕೆಟ್ಟ ಬಜೆಟ್ನ್ನು ನೋಡಿಲ್ಲ'' ಎಂದು ಹೇಳಿದ್ದು, 'ನನ್ನ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ' ಎಂಬ ಬಿಎಸ್ವೈ ಪ್ರಶ್ನೆಗೆ, ''ನಿಮ್ಮ ಸ್ಥಾನ ಬಿಡಿ, ಆಗ ಆ ಸ್ಥಾನದಲ್ಲಿ ನಿಂತು ನಾನು ಹೇಳುತ್ತೇನೆ. ಮುಂದಿನ ಬಾರಿ ಜನರು ನನಗೂ ಅವಕಾಶ ನೀಡುತ್ತಾರೆ. ನಿಮ್ಮ ಕುರ್ಚಿಯಲ್ಲಿ ನಾನು ಕೂರುವ ದಿನವೇನು ದೂರವಿಲ್ಲ. ಜನರು ಬದಲಾವಣೆ ಬಯಸುತ್ತಿದ್ದಾರೆ'' ಎಂದು ಹೇಳಿದರು.
''ಅಭಿವೃದ್ದಿಗೆ ವಿರುದ್ದವಾದ ಬಜೆಟ್ ಈ ರಾಜ್ಯದಲ್ಲೇ ಮಂಡನೆಯಾಗಿರಲಿಲ್ಲ. ಅಭಿವೃದ್ದಿಗೆ ವಿರುದ್ದವಾದ ಬಜೆಟ್ ಮಂಡನೆ ಮಾಡಿರುವುದು ಮಾತ್ರವಲ್ಲದೆ ಅದಕ್ಕೆ ಕೊರೊನಾದ ನೆಪ ಈ ಸರ್ಕಾರ ನೀಡುತ್ತದೆ. ಯಾವಾಗಲೂ ಆದಾಯ ಹಾಗೂ ಖರ್ಚಿನಲ್ಲಿ ಸಮತೋಲನವಿರಬೇಕು'' ಎಂದು ಕಿವಿಮಾತು ಹೇಳಿದರು.
''ಈ ಬಾರಿಯ ಬಜೆಟ್ನಲ್ಲಿ ಯಾವುದೇ ಸಮತೋಲನವಿಲ್ಲ. ವೆಚ್ಚವೇ ಹೆಚ್ಚಾಗಿದೆ. ನಾವು 2004-05 ರಲ್ಲಿ ನಾವು ಸಮತೋಲ ಕಾಯ್ದುಕೊಂಡಿದ್ದೆವು. ಆಗ ನಾನು ಹಣಕಾಸು ಮಂತ್ರಿಯಾಗಿದ್ದೆ. ಅಲ್ಲಿಂದ ಇಲ್ಲಿಯವರೆಗೂ ಅದನ್ನು ಕಾಪಾಡಿಕೊಂಡು ಬರಲಾಗಿತ್ತು. ಆದರೆ ಈ ಸರ್ಕಾರ ಸಾಲ ಸಿಗುತ್ತದೆ ಎಂದು ಎಲ್ಲವೂ ಸಾಲ ಮಾಡಿದೆ. ಆದರೆ ಸಾಲ ಮಾಡುವ ಸಂದರ್ಭದಲ್ಲಿ ನಮಗೆ ಅದನ್ನು ತೀರಿಸಲಾಗುವುದೇ ಎಂದು ಕೂಡಾ ನಾವು ನೋಡಬೇಕು'' ಎಂದು ಕಿಡಿಕಾರಿದರು.
''ಈವರೆಗೆ 26.9% ಸಾಲ ಮಾಡಲಾಗಿದೆ. ಈ ವರ್ಷ 70,000 ಕೋಟಿ ಸಾಲ ಮಾಡಲಾಗಿದೆ. ಅಷ್ಟೇ ಅಲ್ಲದೆ ಮುಂದಿನ ವರ್ಷದಲ್ಲಿ 71,000 ಕೋಟಿ ಸಾಲ ಮಾಡುವುದಾಗಿ ಬಜೆಟ್ನಲ್ಲಿ ಸರ್ಕಾರ ತಿಳಿಸಿದೆ. ಬಿಜೆಪಿ ರಾಜ್ಯದಲ್ಲಿ ಸ್ವರ್ಗ ಎನ್ನುತ್ತಾರೆ. ಆದರೆ ಈಗ ಅಭಿವೃದ್ದಿಗೆಯೇ ಹಣವಿಲ್ಲ. ಎಲ್ಲಿಂದ ಆ ಸ್ವರ್ಗ'' ಎಂದು ಪ್ರಶ್ನಿಸಿದರು.
ಈಗಲೇ ಎಚ್ಚೆತ್ತು ತೆರಿಗೆ ವಸೂಲಿ ಹೆಚ್ಚಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಸಿದ್ದು, 20 ಕೋಟಿ ಮೇಲ್ಪಟ್ಟ ಯೋಜನೆಯನ್ನು ಕೈಬಿಡಿ ಎಂದು ತಿಳಿಸಿದರು.