ಪ್ರತಾಪ್ಗಢ, ಮಾ.15 (DaijiworldNews/PY): ಉತ್ತರ ಪ್ರದೇಶದ ಪ್ರತಾಪ್ಗಢದಲ್ಲಿ ನಕಲಿ ಮದ್ಯ ಸೇವಿಸಿ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ನಕಲಿ ಸಾರಾಯಿ ಸೇವನೆಯೇ ಘಟನೆಗೆ ಕಾರಣ ಎನ್ನಲಾಗಿದೆ.
ಮೃತರನ್ನು ಜವಾಹರಲಾಲ್ ಸರೋಜ್ (56), ವಿಜಯ್ ಕುಮಾರ್ (35) ಮತ್ತು ರಾಮ್ ಪ್ರಸಾದ್ (40) ಎಂದು ಗುರುತಿಸಲಾಗಿದೆ.
ಸಂಗ್ರಾಮ್ಗಢ ಪ್ರದೇಶದ ಮನೋಹರ್ಪುರ ರಾಮ್ಪುರ್ ದಾಮಿ ಮೂಲದ ಮಹಿಳೆ ಸುನೀತಾ ಸರೋಜ್ ಎಂಬಾಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ ಎಂದು ಪ್ರತಾಪ್ಗಢ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮಾಹಿತಿ ನೀಡಿದೆ.
"ನಾಲ್ವರು ಬಾಬುಪಾಲ್ ಪಟೇಲ್ ಎನ್ನುವವರಿಂದ ಮದ್ಯವನ್ನು ಖರೀದಿ ಮಾಡಿ ಸೇವಿಸಿದ್ದರು. ಇದಾದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ತಕ್ಷಣವೇ ಅವರನ್ನು ಸಂಗ್ರಾಮ್ಗಢ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು" ಎಂದು ಅಲಹಾಬಾದ್ ರೇಂಜ್ ಇನ್ಸ್ಪೆಕ್ಟರ್ ಜನರಲ್ ಕವೀಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
"ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಕಳ್ಳಭಟ್ಟಿ ಮಾರಾಟ ಪ್ರಕರಣದಲ್ಲಿ ಬಾಬುಪಾಲ್, ಅವರ ಪತ್ನಿ ಹಾಗೂ ಸಹೋದರನನ್ನು ವಶಕ್ಕೆ ಪಡೆಯಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.