ನವದೆಹಲಿ, ಮಾ.15 (DaijiworldNews/PY): 2016 ದೇಶದ್ರೋಹ ಪ್ರಕರಣದ ಆರೋಪಿಗಳಾದ ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಹಾಗೂ 9 ಮಂದಿಗೆ ಚಾರ್ಜ್ಶೀಟ್ ನೀಡುವಂತೆ ಸೋಮವಾರ ದೆಹಲಿ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪಂಕಜ್ ಶರ್ಮಾ ಅವರು ಈ ಬಗ್ಗೆ ವಿಚಾರಣೆ ನಡೆಸಿದ್ದು, "ಎಪ್ರಿಲ್ 7ರಂದು ಪ್ರಕರಣದ ದಾಖಲೆಗಳನ್ನು ಪರಿಶೀಲಿಸಲಾಗುವುದು" ಎಂದರು. ಈ ಸಂದರ್ಭ ಅವರು ಈ ಪ್ರಕರಣದಲ್ಲಿ ಈ ಹಿಂದೆ ಬಂಧನಕ್ಕೊಳಗಾಗಿದ್ದ ಏಳು ಮಂದಿ ಆರೋಪಿಗಳಿಗೆ ಜಾಮೀನು ನೀಡಿದರು.
ಕಾಶ್ಮೀರಿ ವಿದ್ಯಾರ್ಥಿಗಳಾದ ಅಕ್ವಿಬ್ ಹುಸೇನ್, ಮುಜೀಬ್ ಹುಸೇನ್, ಮುನೀಬ್ ಹುಸೇನ್, ಉಮರ್ ಗುಲ್, ರಾಯಿಯಾ ರಸ್ಸೋಲ್, ಬಶೀರ್ ಭಟ್ ಮತ್ತು ಬಶರತ್ ಇವರು ಈ ಪ್ರಕರಣದ ಇತರ ಏಳು ಆರೋಪಿಗಳು. ಈ ಪೈಕಿ ಕೆಲವು ಮಂದಿ ಜೆಎನ್ಯು, ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ ಹಾಗೂ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಓದುತ್ತಿದ್ದರು.
ಕನ್ಹಯ್ಯ ಕುಮಾರ್ ಸೇರಿದಂತೆ ಜೆಎನ್ಯುನ ಮಾಜಿ ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಹಾಗೂ ಇತರರ ವಿರುದ್ದ ಭಾರತದ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎನ್ನುವ ಆರೋಪವಿದೆ.