ಅಮರಾವತಿ, ಮಾ.15 (DaijiworldNews/MB) : ಆಂಧ್ರಪ್ರದೇಶದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಭರ್ಜರಿ ಗೆಲುಸು ಸಾಧಿಸಿದ್ದು 12 ಮಹಾನಗರ ಪಾಲಿಕೆಗಳನ್ನೂ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿದೆ. ಟಿಡಿಪಿ ಅನಂತಪುರ ಜಿಲ್ಲೆಯ ತಾಡಿಪತ್ರಿ ಮುನ್ಸಿಪಾಲಿಟಿಯನ್ನು ಮಾತ್ರ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇಲ್ಲಿನ 36 ವಾರ್ಡ್ಗಳ ಪೈಕಿ 18 ಟಿಡಿಪಿಗೆ, 16 ವೈಎಸ್ಆರ್ಸಿಪಿಗೆ ಮತ್ತು 2 ಇತರರಿಗೆ ಜಯ ಲಭಿಸಿದೆ.
ಮಾರ್ಚ್ 10ರಂದು 12 ನಗರ ಪಾಲಿಕೆ ಮತ್ತು 71 ಪುರಸಭೆಗಳಿಗೆ ಚುನಾವಣೆ ನಡೆದಿದ್ದು ಪ್ರತಿಪಕ್ಷ ತೆಲುಗುದೇಶಂ ಪಾರ್ಟಿ (ಟಿಡಿಪಿ)ಯನ್ನು ಸತತ ಮೂರನೇ ಬಾರಿಗೆ ಸಿಎಂ ಜಗನ್ ಹೀನಾಯವಾಗಿ ಸೋಲಿಸಿದ್ದಾರೆ.
ಆಂಧ್ರಪ್ರದೇಶದ ನೂತನ ಕಾರ್ಯಕಾರಿ ರಾಜಧಾನಿಯಾಗಿ ವಿಶಾಖಪಟ್ಟಣಂ ಅನ್ನು ಘೋಷಿಸಿದ್ದ ಸಿಎಂ ಜಗನ್ ಅವರ ಪಕ್ಷಕ್ಕೆ ವಿಶಾಖಪಟ್ಟಣಂ ಮಹಾನಗರ ಪಾಲಿಕೆಯಲ್ಲಿ ಗೆಲುವು ದಕ್ಕಿದೆ.
ಚಿತ್ರನಟ ಪವನ್ ಕಲ್ಯಾಣ್ ಅವರ ನೇತೃತ್ವದ ಜನಸೇನಾ ಜತೆಗೆ ಕೈಜೋಡಿಸಿ ಆಂಧ್ರಪ್ರದೇಶದಲ್ಲಿ ತನ್ನ ಛಾಯೆ ಮೂಡಿಸಲು ಯತ್ನಿಸಿದ ಬಿಜೆಪಿಗೆ ಭಾರೀ ಮುಖಭಂಗವಾಗಿದೆ.