ಬೆಂಗಳೂರು, ಮಾ.15 (DaijiworldNews/MB) : ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಮೂಡಿಸಿದೆ. ಸೊರಬದ ಮಾಜಿ ಶಾಸಕ ಎಸ್.ಮಧುಬಂಗಾರಪ್ಪ ಕಾಂಗ್ರೆಸ್ ಸೇರುವುದು ಅಧಿಕೃತವಾಗುತ್ತಿರುವ ನಡುವೆಯೇ ಮಧುಬಂಗಾರಪ್ಪ ಅವರು ಭಾವನಾದ ಶಿವರಾಜ್ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ಮೂರು ದಿನಗಳ ಹಿಂದೆ ಡಿಕೆಶಿಯನ್ನು ಭೇಟಿ ಮಾಡಿದ್ದ ಮಧುಬಂಗಾರಪ್ಪ ಅವರು ತನ್ನ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರು ಕೂಡಾ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದ್ದರು. ಈ ಬೆನ್ನಲ್ಲೇ ಸೋಮವಾರ ಡಿಕೆಶಿಯನ್ನು ಗೀತಾ ಅವರ ಪತಿ ನಟ ಶಿವರಾಜ್ ಕುಮಾರ್ ಭೇಟಿ ಮಾಡಿರುದ್ದಾರೆ.
ಭೇಟಿ ವೇಳೆ ತನ್ನ ಪತ್ನಿ ಗೀತಾ ಅವರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಶಿವರಾಜ್ ಕುಮಾರ್ ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ನಟ ಶಿವರಾಜ್ ಕುಮಾರ್ ಮಾತ್ರ, ''ಇದು ಸೌಜನ್ಯದ ಭೇಟಿಯಷ್ಟೇ, ರಾಜಕೀಯ ಮಾತನಾಡಲು ಹೋಗಿಲ್ಲ'' ಎಂದು ಹೇಳಿದ್ದಾರೆ.
ಇನ್ನು ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್ ಕುಮಾರ್ ಅವರಿಗೆ ರಾಜಕೀಯ ಎನ್ನುವುದು ಹೊಸತೇನಲ್ಲ. 2014 ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಬಿ.ಎಸ್.ಯಡಿಯೂರಪ್ಪ ಎದುರು ಸೋಲನುಭವಿಸಿದ್ದರು.