ನವದೆಹಲಿ, ಮಾ.15 (DaijiworldNews/PY): ಬಿಜೆಪಿ ಸಂಸದ ಕೌಶಲ್ ಕಿಶೋರ್ ಅವರ ಸೊಸೆ ಲಕ್ನೋ ಸಮೀಪದ ಕಾಕೋರಿಯಲ್ಲಿರುವ ರಾಜಕಾರಣಿಗಳ ಮನೆಯ ಹೊರಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರು ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಕೌಶಲ್ ಕಿಶೋರ್ ಅವರು ಮೋಹನ್ ಲಾಲ್ಗಂಜ್ ಸ್ಥಾನದಿಂದ ಲೋಕಸಭಾ ಸಂಸದರಾಗಿದ್ದಾರೆ.
ವಿಡಿಯೋದಲ್ಲಿ ಅಂಕಿತಾ ಅವರು, ತಮ್ಮ ಪತಿ ಆಯುಷ್, ಅವರ ಮಾವ ಕೌಶಲ್ ಕಿಶೋರ್, ಅತ್ತೆ ಜೈ ದೇವಿ ಹಾಗೂ ಸೋದರ ಮಾವನ ವಿರುದ್ದ ಗಂಭೀರ ಆರೋಪ ಮಾಡಿದ್ದು, "ನಾನು ಈ ತೀರ್ಮಾನ ಕೈಗೊಳ್ಳಲು ಅವರೇ ಕಾರಣ" ಎಂದಿದ್ದಾರೆ.
"ಅಂಕಿತಾ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ" ಎಂದು ವೈದ್ಯರು ತಿಳಿಸಿದ್ದಾರೆ.
ಲಕ್ನೋದಲ್ಲಿ ಬಿಜೆಪಿ ಸಂಸದರ ಮಗನ ಮೇಲೆ ಗುಂಡು ಹಾರಿಸಲಾಗಿದೆ ಎನ್ನುವ ವಿಚಾರದ ಬಗ್ಗೆ ವರದಿಯಾದ ಕೆಲವೇ ದಿನಗಳಲ್ಲಿ ಈ ವಿಡಿಯೋ ಬಂದಿದೆ.
ಮಡಿಯಾಲ್ ಪ್ರದೇಶದಲ್ಲಿ ಕೌಶಲ್ ಕಿಶೋರ್ ಅವರ ಪುತ್ರ ಆಯುಷ್ (30) ಅವರಿಗೆ ಗುಂಡು ಹಾರಿಸಲಾಗಿದ್ದು, ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಥಮ ಚಿಕಿತ್ಸೆಯ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.